ಕಳೆದ ಮಂಗಳವಾರ ಕಾವೇರಿಗಾಗಿ ನಮ್ಮ ರಾಜ್ಯ ರಾಜಧಾನಿ ಬಂದ್ ಆಗಿತ್ತು. ನಾಳೆ ಕರ್ನಾಟಕ ಬಂದ್ಗೆ ಸಕಲ ಸಿದ್ಧತೆ ನಡೆದಿದೆ. ಕನ್ನಡ ಒಕ್ಕೂಟಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ಗೆ ಚಿತ್ರರಂಗ ಕೈ ಜೋಡಿಸಿದೆ. ಹಿರಿಯ ನಟ ಡಾ. ಶಿವರಾಜ್ಕುಮಾರ್ ನೇತೃತ್ವದಲ್ಲಿ ಇಡೀ ಚಿತ್ರರಂಗ ನಾಳೆಯ ಹೋರಾಟದಲ್ಲಿ ಭಾಗಿಯಾಗಲಿದೆ. ಶೂಟಿಂಗ್ ಜೊತೆ ಥಿಯೇಟರ್ ಕೂಡ ಕ್ಲೋಸ್ ಆಗಲಿವೆ. ಹಾಗಾದ್ರೆ ಚಿತ್ರರಂಗದ ಮಂದಿಯಿಂದ ನಾಳೆಯ ಬಂದ್ ಹೇಗಿರಲಿದೆ? ಯಾರೆಲ್ಲಾ ಸ್ಟಾರ್ ಗಳು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ..
ಮಂಗಳವಾರವಷ್ಟೇ ಬೆಂಗಳೂರು ಬಂದ್ ಮಾಡಿ ಯಶಸ್ವಿಯಾಗಿದ್ದ ಹೋರಾಟಗಾರು, ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಕ್ರೋಶ ಹೊರಹಾಕುವುದರ ಜೊತೆಗೆ ಕರ್ನಾಟಕ ಬಂದ್ ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಈ ಬಂದ್ಗೆ ಕನ್ನಡ ಚಿತ್ರರಂಗ ಸಾಥ್ ನೀಡಿದೆ.
ನಿನ್ನೆ ಕನ್ನಡ ಚಳವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಕರ್ನಾಟಕ ಬಂದ್ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಮ್ ಸುರೇಶ್ ಚಿತ್ರರಂಗದ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಸುರೇಶ್ ಅವರು ನಾಳೆಯ ಬಂದ್ನಲ್ಲಿ ಭಾಗಿಯಾಗುವಂತೆ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ರು. ವಾಣಿಜ್ಯ ಮಂಡಳಿಯ ಮನವಿಗೆ ಶಿವಣ್ಣ ಸ್ಪಂದಿಸಿದ್ದು, ಶುಕ್ರವಾರದ ಬಂದ್ನಲ್ಲಿ ಭಾಗಿಯಾಗುವುದಾಗಿ ಶಿವರಾಜ್ಕುಮಾರ್ ಹೇಳಿದ್ದಾಗಿ ಎನ್ ಎಮ್ ಸುರೇಶ್ ತಿಳಿಸಿದ್ದಾರೆ.
ಶಿವರಾಜ್ಕುಮಾರ್ ಭೇಟಿ ನಂತರ ಎನ್ ಎಮ್ ಸುರೇಶ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಜೊತೆ ಸೇರಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಯುವರಾಜ ನಿಖಿಲ್ ಕುಮಾರ್ಸ್ವಾಮಿ, ಕೋಮಲ್ ಅವರನ್ನು ಭೇಟಿಯಾಗಿ ಬಂದ್ನಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಧ್ರುವಸರ್ಜಾ, ನಿಖಿಲ್ ಹಾಗೂ ಕೋಮಲ್ ಬಂದ್ನಲ್ಲಿ ಭಾಗಿಯಾಗುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ರಣ್ಬೀರ್ ಕಪೂರ್ ಬರ್ತ್ಡೇ: 'ಅನಿಮಲ್' ಟೀಸರ್ ರಿಲೀಸ್
ಶಿವಣ್ಣನ ನಾಯಕತ್ವದಲ್ಲಿ ಇಡೀ ಚಿತ್ರರಂಗ ಚಲನಚಿತ್ರ ವಾಣಿಜ್ಯ ಮಂಡಳಿಯ ಪಕ್ಕದಲ್ಲಿರೋ ಗುರುರಾಜ್ ಕಲ್ಯಾಣ ಮಂಟಪದ ಹತ್ತಿರ ನಾಳೆ ಬೆಳಗ್ಗೆ 11 ಗಂಟೆಗೆ ಸೇರಲಿದೆ. ಈ ಮೂಲಕ ಕಾವೇರಿ ಪರ ಧ್ವನಿ ಎತ್ತಲಿದ್ದಾರೆ. ಕನ್ನಡ ಪರ ಸಂಘಟನೆಗಳಿಂದ ಟೌನ್ ಹಾಲ್ ಬಳಿಯಿಂದ ಫ್ರೀಡಂ ಪಾರ್ಕ್ ವರೆಗೂ ನಡೆಯುವ ರ್ಯಾಲಿಯಲ್ಲಿ ಚಿತ್ರರಂಗ ಭಾಗಿಯಾಗೋದು ಡೌಟ್. ಯಾಕೆಂದರೆ ಚಿತ್ರರಂಗದವರೇ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಾನದಾರಿಯಲಿ ಬಿಡುಗಡೆ... ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಮೆಚ್ಚಿದ ಸ್ಯಾಂಡಲ್ವುಡ್ ಸ್ಟಾರ್ಸ್
ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತ ಮಾಡುವುದಾಗಿ ಪ್ರದರ್ಶಕರ ವಲಯದ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್ ಹೇಳಿದ್ದಾರೆ. ಅದೇ ರೀತಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕಡೆಯಿಂದಲೂ ನಾಳೆಯ ಬಂದ್ಗೆ ಬೆಂಬಲ ನೀಡಲಿದ್ದೇವೆ ಎಂದು ಸಂಘದ ಉಪಾಧ್ಯಕ್ಷ ಗಣೇಶ್ ರಾವ್ ತಿಳಿಸಿದ್ದಾರೆ. ಒಟ್ಟಾರೆ ನಾಳೆಯ ಕರ್ನಾಟಕ ಬಂದ್ಗೆ ಶಿವರಾಜಕುಮಾರ್ ನೇತೃತ್ವದಲ್ಲಿ ಚಿತ್ರರಂಗ ಬೆಂಬಲ ನೀಡುವ ಮೂಲಕ ಕಾವೇರಿ ಹೋರಾಟಕ್ಕೆ ಸಾಥ್ ನೀಡಲಿದೆ.