ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಈ ವರ್ಷದ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕೆಜಿಎಫ್ 2, ಕಾಂತಾರ ಬಳಿಕ ಇಡೀ ಭಾರತೀಯ ಸಿನಿಮಾ ರಂಗದ ಕಣ್ಣು ಸ್ಯಾಂಡಲ್ವುಡ್ ಮೇಲಿದ್ದು, ಟೀಸರ್ನಿಂದಲೇ ಸಖತ್ ಸೌಂಡ್ ಮಾಡಿದೆ ಕಬ್ಜ. ಈ ಚಿತ್ರದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ನಿರ್ದೇಶಕ ಆರ್ ಚಂದ್ರು ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
42ನೇ ವಸಂತಕ್ಕೆ ಕಾಲಿಟ್ಟಿರೋ ನಿರ್ದೇಶಕ ಆರ್ ಚಂದ್ರು ತಮ್ಮ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಸಹಕಾರ ನಗರದಲ್ಲಿರೋ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಕಬ್ಜ ಸಿನಿಮಾ ಜಪ ಮಾಡುತ್ತಿರುವ ನಿರ್ದೇಶಕ ಆರ್ ಚಂದ್ರು ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಮತ್ತೊಂದು ಮೈಲುಗಲ್ಲು: ಟೀಸರ್ ಹಾಗೂ ಹಾಡುಗಳಿಂದಲೇ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿರೋ ಕಬ್ಜ ಸಿನಿಮಾ ಅಂದಾಕ್ಷಣ ಎನನಪಿಗೆ ಬರೋದು ನಿರ್ದೇಶಕ ಆರ್ ಚಂದ್ರು ಅವರ ಕನಸಿನ ಸಿನಿಮಾ. ಏಕೆಂದರೆ ಇತರೆ ಭಾಷೆಯವರು ಕನ್ನಡ ಚಿತ್ರರಂಗದವರು ಏನು ಮಾಡುತ್ತಿದ್ದಾರೆ ಎಂದು ನೋಡುತ್ತಿರುವ ಈ ಸಮಯದಲ್ಲಿ ನಾನು ಗೆಲ್ಲಬೇಕಾಗಿರುವ ಸಿನಿಮಾ. ನಾನು ಮಾತ್ರವಲ್ಲದೇ ಇಡೀ ಕಬ್ಜ ಚಿತ್ರತಂಡ ಗೆಲ್ಲುವುದರ ಮೂಲಕ ಕನ್ನಡ ಚಿತ್ರರಂಗ ಮತ್ತೊಂದು ಮೈಲಿಗಲ್ಲು ಸಾಧಿಸಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೀಮ್ ವರ್ಕ್: ಕಬ್ಜ ಸಿನಿಮಾವನ್ನು ಸುಮ್ಮನೆ ಕಾಟಾಚಾರಕ್ಕೆ ಮಾಡಿಲ್ಲ. ಈ ಸಿನಿಮಾಗಾಗಿ ಸಾಕಷ್ಟು ವರ್ಕ್ ಮಾಡಲಾಗಿದೆ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬ ಆರ್ಟಿಸ್ಟ್ ಪಾತ್ರದಲ್ಲಿ ಒಂದು ಮಹತ್ವ ಇದೆ. ಇದು ಇಡೀ ಕಬ್ಜ ಟೀಮ್ ವರ್ಕ್ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದರು.
ಚಾಲೆಂಜಿಂಗ್ ವರ್ಕ್: ಕಬ್ಜ ಸಿನಿಮಾದಲ್ಲಿ 70 ಹಾಗು 80ರ ದಶಕದ ಅಂಡರ್ ವರ್ಲ್ಡ್ ಡಾನ್ ಆಗಿ ಉಪೇಂದ್ರ ಸರ್ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಅವರು ರೆಟ್ರೋ ಅವತಾರದಲ್ಲಿ ಗಮನ ಸೆಳೆಯಲಿದ್ದಾರೆ. ಉಪ್ಪಿ ಸರ್ ಆ ರೌಡಿಸಂಗೆ ಓಂಕಾರ ಹಾಕಿದವರು. ಇದೊಂದು ಗ್ಯಾಂಗ್ಸ್ಟಾರ್ ಸಿನಿಮಾ, ನಿಜಕ್ಕೂ ಈ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗಲಿದೆ. ಹಾಗೇ ಅಪ್ಪು ಸರ್ ಹುಟ್ಟುಹಬ್ಬದ ದಿನ ಈ ಚಿತ್ರ ಬಿಡುಗಡೆ ಆಗುತ್ತಿರೋದು ಚಿತ್ರದ ಮತ್ತೊಂದು ವಿಶೇಷ. ಅದ್ಧೂರಿ ಮೇಕಿಂಗ್ ಜೊತೆಗೆ ದೊಡ್ಡ ಸ್ಟಾರ್ ಕಾಸ್ಟ್ ಹೊಂದಿರುವ ಕಬ್ಜ ಸಿನಿಮಾ ಮಾಡಿದ್ದು ಒಂದು ಚಾಲೆಂಜಿಂಗ್ ವರ್ಕ್ ಆಗಿತ್ತು ಅಂತಾ ಚಂದ್ರು ತಿಳಿಸಿದರು.
ನಿರ್ದೇಶಕ ಆರ್ ಚಂದ್ರು ಜನ್ಮದಿನ: ಇನ್ನೂ ನನ್ನ ಜೀವನದಲ್ಲಿ ನಾನು ಯಾವತ್ತೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ, ನನ್ನ ಹೆಂಡತಿ ಹಾಗೂ ಸ್ನೇಹಿತರ ಬಲವಂತಕ್ಕೆ ನಾನು ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ ಎಂದು ಚಂದ್ರು ತಿಳಿಸಿದರು.
ಇದನ್ನೂ ಓದಿ: ವರನಟ ರಾಜ್ ಕುಮಾರ್ ಆದರ್ಶದ ಹಾದಿಯಲ್ಲಿ ಕಬ್ಜ ನಿರ್ದೇಶಕ ಆರ್ ಚಂದ್ರು
ಕನ್ನಡ ಸಿನಿಮಾ ಅಲ್ಲದೇ ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಆರ್ ಚಂದ್ರು ವ್ಯವಸಾಯದ ಬಗ್ಗೆ ತಮ್ಮ ಒಲವು ತೋರಿಸಿದ್ದಾರೆ. ನಿರ್ದೇಶಕ ಆಗಲಿಲ್ಲ ಎಂದರೆ ನಾನು ವ್ಯವಸಾಯ ಮಾಡುತ್ತಿದ್ದೆ. ನಾನು ಮೂಲತಃ ರೈತ ಕುಟುಂಬದವನು. ನಾನು ಇವತ್ತಿಗೂ ನಮ್ಮ ಜಮೀನಿನಲ್ಲಿ ಬೇಸಾಯ ಮಾಡುತ್ತೇನೆ. ಹಲವಾರು ಬಗೆಯ ತರಕಾರಿಗಳನ್ನು ಬೆಳೆಯುತ್ತೇನೆ. ಆ ಕೆಲಸ ನನಗೆ ಬಹಳ ಖುಷಿ ಕೊಡುತ್ತೆ ಅಂತಾ ನಿರ್ದೇಶಕ ಆರ್ ಚಂದ್ರು ತಿಳಿಸಿದ್ದಾರೆ.