ಬಾಲಿವುಡ್ ನಟ ವರುಣ್ ಧವನ್ ಹಾಗೂ ನಟಿ ಜಾನ್ವಿ ಕಪೂರ್ ಅವರು ಜೋಡಿಯಾಗಿ ಅಭಿನಯಿಸಿರುವ 'ಬವಾಲ್' ಸಿನಿಮಾದ ವಿರುದ್ಧ ಪ್ರೇಕ್ಷಕರ ಒಂದು ವರ್ಗ ಧ್ವನಿಯೆತ್ತಿತ್ತು. ಸಿನಿಮಾದಲ್ಲಿನ ಆಶ್ವಿಟ್ಜ್‌ನಲ್ಲಿರುವ ನಾಜಿ ಡೆತ್ ಕ್ಯಾಂಪ್ನ ಸ್ಫೂರ್ತಿ ಪಡೆದ ದೃಶ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಕೇಳಿಬಂದಿತ್ತು. ಆದರೆ ಈಗ, ಯಹೂದಿ ಸಂಘಟನೆಯೊಂದು, ನೇರವಾಗಿ ಒಟಿಟಿಯಲ್ಲಿ ಬಿಡುಗಡೆಗೊಂಡಿರುವ ಸಿನಿಮಾ ಬವಾಲ್ ಅನ್ನು ಒಟಿಟಿ ಫ್ಲಾಟ್ಫಾರ್ಮ್ನಿಂದ ತೆಗೆದುಹಾಕುವಂತೆ ಪ್ರೈಮ್ ವಿಡಿಯೋಗೆ ಬಹಿರಂಗ ಪತ್ರ ಬರೆದಿದೆ.
ನಾಜಿ ಹತ್ಯಾಕಾಂಡದಲ್ಲಿ ಮಡಿದವರ ಸ್ಮರಣೆಗಾಗಿ ಮೀಸಲಾಗಿರುವ ಮಾನವ ಹಕ್ಕುಗಳ ಸಂಘಟನೆಯಾದ ಸೈಮನ್ ವೈಸೆಂತಾಲ್ ಸೆಂಟರ್ (SWC) ಬವಾಲ್ ಚಲನಚಿತ್ರವನ್ನು ಪ್ರೈಮ್ ವಿಡಿಯೋದಿಂದ ತೆಗೆದುಹಾಕುವಂತೆ ವಿನಂತಿ ಮಾಡಿಕೊಂಡಿದೆ. 'ನಾಜಿ ಹತ್ಯಾಕಾಂಡವನ್ನು ಕಥಾವಸ್ತುವಿನ ಸಾಧನವಾಗಿ ವಿಲಕ್ಷಣ ದುರುಪಯೋಗಪಡಿಸಿಕೊಂಡ ಕಾರಣ' ಬವಾಲ್ ಸಿನಿಮಾವನ್ನು OTT ಪ್ಲಾಟ್‌ಫಾರ್ಮ್ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸುವಂತೆ ಪತ್ರದಲ್ಲಿ ಹೇಳಿದೆ.
'ಸಮಕಾಲೀನ ಕಾಲದಲ್ಲಿ ನಡೆಯುವ ಚಿತ್ರದ ಕಥಾಹಂದರ ಆಶ್ವಿಟ್ಜ್‌ನಲ್ಲಿನ ಗ್ಯಾಸ್ ಚೇಂಬರ್ ಒಳಗೆ ಮುಖ್ಯಪಾತ್ರಗಳು ಪ್ರವೇಶಿಸುವಲ್ಲಿಗೆ ಕೊನೆಗೊಳ್ಳುತ್ತದೆ. ಚಿತ್ರದಲ್ಲಿ ಹಿಟ್ಲರ್ ಅನ್ನು ಮಾನವ ದುರಾಸೆಯ ರೂಪಕವಾಗಿ ಬಳಸಲಾಗಿದೆ. ಒಂದು ದೃಶ್ಯದಲ್ಲಿ ನಾಯಕನು ಆತನ ಹೆಂಡತಿಗೆ "ನಾವೆಲ್ಲರೂ ಸ್ವಲ್ಪ ಹಿಟ್ಲರ್‌ನಂತೆಯೇ ಇದ್ದೇವೆ? ಅಲ್ಲವೇ" ಎಂದು ಹೇಳುತ್ತಾನೆ' ಎಂದು ಪತ್ರದಲ್ಲಿ ಬರೆಯಲಾಗಿದೆ.
ಬಹಿರಂಗ ಪತ್ರದಲ್ಲಿ, SWC ಯ ರಬ್ಬಿ ಅಬ್ರಹಾಂ ಕೂಪರ್ ಅವರು ಚಲನಚಿತ್ರ ಮತ್ತು ಅದರ ನಿರ್ದೇಶಕ ನಿತೇಶ್ ತಿವಾರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಆಶ್ವಿಟ್ಜ್ ಒಂದು ರೂಪಕವಷ್ಟೇ ಅಲ್ಲ. ದುಷ್ಟ ಮಾನವರು ಎಷ್ಟು ಸಮರ್ಥರಾಗಿದ್ದಾರೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನವಾಗಿದೆ. ನಿರ್ದೇಶಕ ನಿತೇಶ್ ಅವರು ಹಿಟ್ಲರ್‌ನ ಕೈಯಲ್ಲಿ ನರಳಿದ್ದ ಲಕ್ಷಾಂತರ ಜನರ ನೆನಪನ್ನು ಕ್ಷುಲ್ಲಕಗೊಳಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ.'
'ಸಿನಿಮಾ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ನಿರ್ದೇಶಕರು ನಾಜಿ ಡೆತ್ ಕ್ಯಾಂಪ್‌ನಲ್ಲಿ ಫ್ಯಾಂಟಸಿ ಭಾಗವನ್ನು ಸಿನಿಮಾದಲ್ಲಿ ಚಿತ್ರೀಕರಣ ಮಾಡಿರುವುದಾರೆ, ಅವರು ಯಶಸ್ವಿಯಾಗಿದ್ದಾರೆ. ಆದರೆ "ಪ್ರತಿಯೊಂದು ಸಂಬಂಧವು ಅವರ ಆಶ್ವಿಟ್ಜ್ ಮೂಲಕ ಹೋಗುತ್ತದೆ," ನಂತಹ ಡೈಲಾಗ್ಗಳ ಮೂಲಕ ಚಲನಚಿತ್ರ ಹತ್ಯಾಕಾಂಡದ ಸಮಯದಲ್ಲಿ ಲಕ್ಷಾಂತರ ಜನರ ಹತ್ಯೆ ಕ್ಷುಲ್ಲಕಗೊಳಿಸುತ್ತದೆ. ಇದು ನಾಜಿಯ ಕ್ಯಾಂಪ್‌ನಲ್ಲಿನ ಹಲವಾರು ಯಾಹೂದಿಗಳು ಸಾವನ್ನಪ್ಪಿದ್ದ ಜರ್ಮನಿಯ ಹತ್ಯೆಯನ್ನು ಸೂಚಿಸುತ್ತದೆ.'
ಅಮೆಜಾನ್ ಪ್ರೈಮ್ ವೀಡಿಯೊ ಬವಾಲ್ ಸಿನಿಮಾದಿಂದ ಹಣ ಗಳಿಸುವುದನ್ನು ನಿಲ್ಲಿಸಬೇಕು. ಇ ಹಿಂದೆ ಸಿನಿಮಾ ರಿಲೀಸ್ ಆದ ಕೆಲವೇ ಹೊತ್ತಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರು ಚಲನಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಎರಡನೆಯ ಮಹಾಯುದ್ಧ ಮತ್ತು ನಾಯಕರ ನಡುವಿನ ಪ್ರಣಯದ ನಡುವಿನ ಅಸಂಬದ್ಧ ಮತ್ತು ಆಕ್ರಮಣಕಾರಿ ಹೋಲಿಕೆಯನ್ನು ಚಿತ್ರಿಕರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು.
ಇದನ್ನೂ ಓದಿ: ದಕ್ಷಿಣ ಚಿತ್ರರಂಗದತ್ತ ಬಾಲಿವುಡ್ ಮಂದಿಯ ಒಲವು: ಅಟ್ಲೀ ಜೊತೆ ಕೈ ಜೋಡಿಸಿದ ವರುಣ್ ಧವನ್!