ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ 'ಜವಾನ್' ಸಿನಿಮಾದ ಪ್ರಿವ್ಯೂ ಇಂದು ಬಿಡುಗಡೆಯಾಗಿದೆ. 2 ನಿಮಿಷಗಳ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. 'ಜವಾನ್' ಅಪ್ಡೇಟ್ಗಾಗಿ ಕಾಯುತ್ತಿದ್ದ ಸಿನಿ ಪ್ರೇಕ್ಷಕರು ಕಿಂಗ್ ಖಾನ್ ಲುಕ್ಗೆ ಫಿದಾ ಆಗಿದ್ದಾರೆ. ಚಿತ್ರದ ಸಂಭಾಷಣೆಗಳು ಮತ್ತು ಸಾಹಸ ದೃಶ್ಯಗಳು ರೋಚಕವಾಗಿದೆ.
ಆ್ಯಕ್ಷನ್ ಪ್ಯಾಕ್ಡ್ 'ಜವಾನ್' ಪ್ರಿವ್ಯೂ ಜನರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದಿದೆ. ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಸೀರೆಯಲ್ಲಿ ತಮ್ಮ ಹೋರಾಟದ ದೃಶ್ಯದಿಂದ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಕಿಂಗ್ ಖಾನ್ ಬಹು ತೀವ್ರವಾದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಗಳಲ್ಲಿ ಶಾರುಖ್ ಗಾಯಗೊಂಡು ಮುಖವನ್ನು ಪೂರ್ತಿ ಬ್ಯಾಂಡೇಜ್‌ನಿಂದ ಮುಚ್ಚಿರುವುದನ್ನು ನೋಡುತ್ತೇವೆ. ಆದರೆ ಬಿಡುಗಡೆಯಾದ ಪ್ರಿವ್ಯೂನಲ್ಲಿ ಅನೇಕ ಅವತಾರದಲ್ಲಿ ಕಿಂಗ್ ಖಾನ್ ಕಾಣಿಸಿಕೊಂಡಿದ್ದಾರೆ.
ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಸಣ್ಣದಾಗಿ ಕಾಣಿಸಿಕೊಂಡರು. ಒಂದು ನಿರ್ದಿಷ್ಟ ದೃಶ್ಯದಲ್ಲಿ, ನಯನತಾರಾ ತೀವ್ರವಾದ ಹೊಡೆದಾಟದ ವೇಳೆ ಶಾರುಖ್ ಅವರನ್ನು ಬೆನ್ನಟ್ಟುವುದನ್ನು ಕಾಣಬಹುದು. ಪ್ರಿವ್ಯೂ ಕೊನೆಯಲ್ಲಿ ಶಾರುಖ್ ಬೋಳು ತಲೆಯ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೂ 2 ನಿಮಿಷದ ಈ ವಿಡಿಯೋ ಎಲ್ಲರನ್ನೂ ಬೆರಗುಗೊಳಿಸಿದೆ. ನಿರ್ದೇಶಕ ಅಟ್ಲಿ ಪ್ರಸ್ತುತಪಡಿಸಿದ ರೀತಿ ಸಿನಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.
ಇದನ್ನೂ ಓದಿ: ರವಿತೇಜ- ಗೋಪಿಚಂದ್ ಕಾಂಬಿನೇಷನ್ನಲ್ಲಿ 4ನೇ ಸಿನಿಮಾ ಫಿಕ್ಸ್; ಮೋಷನ್ ಪೋಸ್ಟರ್ ಔಟ್
ಕಿಂಗ್ ಖಾನ್ ಅವರ ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ವರ್ಷದ ಆರಂಭದಲ್ಲಿ ಶಾರುಖ್ ನಟನೆಯ ಪಠಾಣ್ ಸಿನಿಮಾ ತೆರೆಕಂಡಿದೆ. ಹಲವು ವಿವಾದಗಳನ್ನು ಎದುರಿಸಿ, ಬಾಯ್ಕಾಟ್ ಭಯದ ನಡುವೆಯೇ ರಿಲೀಸ್ ಆದ ಈ ಸಿನಿಮಾದ ಯಶಸ್ಸು ಮಾತ್ರ ಅಭೂತಪೂರ್ವ.
- " class="align-text-top noRightClick twitterSection" data="">
ಶಾರುಖ್ ಖಾನ್ ನಾಲ್ಕು ವರ್ಷಗಳ ಬ್ರೇಕ್ ಬಳಿಕ ಬಂದ ಸಿನಿಮಾ 1,000 ಕೋಟಿ ರೂ.ನ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆ. ಸೂಪರ್ ಹಿಟ್ ಪಠಾಣ್ ಬಳಿಕ ಈ ಸಾಲಿನಲ್ಲೇ ಬಿಡುಗಡೆ ಆಗುತ್ತಿರುವ ಶಾರುಖ್ ಅವರ ಮತ್ತೊಂದು ಬಿಗ್ ಬಜೆಟ್ ಚಿತ್ರವಿದು. ಕಂಪ್ಲೀಟ್ ಆ್ಯಕ್ಷನ್ ಎಂಟರ್‌ಟೈನ್ ಸಿನಿಮಾ ಇದು. ಶಾರುಖ್ ಖಾನ್ ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಈ ಸಿನಿಮಾ ನಿರ್ಮಿಸಿದ್ದು, ಸೌತ್ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶಿಸಿದ್ದಾರೆ.
ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್ ಅಲ್ಲದೇ ಡಂಕಿ ಸಿನಿಮಾದಲ್ಲೂ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2023ರ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಶಾರುಖ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಈ ಎರಡೂ ಸಿನಿಮಾಗಳ ನಾನ್ ಥಿಯೇಟ್ರಿಕಲ್ ರೈಟ್ಸ್ 480 ಕೋಟಿ ರೂ.ಗೆ ಮಾರಾಟವಾಗಿದೆಯಂತೆ. ಮತ್ತೊಂದೆಡೆ ಸಲ್ಮಾನ್ ಮುಖ್ಯಭೂಮಿಕೆಯ ಟೈಗರ್ 3 ಚಿತ್ರದಲ್ಲಿ ಶಾರುಖ್ ವಿಶೇಷ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: Bawaal trailer: ವರುಣ್ ಧವನ್- ಜಾಹ್ನವಿ ಕಪೂರ್ ನಟನೆಯ 'ಬವಾಲ್' ಟ್ರೇಲರ್ ಔಟ್