ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡಿದೆ. ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಪ್ರಕಾರ, ಚಿತ್ರವು ತೆರೆಕಂಡ ಏಳು ದಿನಗಳಲ್ಲಿ 375 ಕೋಟಿ ರೂ. ಗಡಿ ದಾಟುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಥಿಯೇಟರ್ಗಳಲ್ಲಿ ಸಿನಿಮಾ ಎರಡಂಕಿಯಲ್ಲಿ ಕಲೆಕ್ಷನ್ ಮಾಡುತ್ತಿದ್ದು, ವೇಗದ ಓಟ ಮುಂದುವರೆಸಿದೆ.
ವಿಶ್ವದಾದ್ಯಂತ 375 ಕೋಟಿ ರೂ. ದಾಟಿದ 'ಜೈಲರ್': ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 10 ರಂದು ತೆರೆಗೆ ಅಪ್ಪಳಿಸಿತು. ಈ ಚಿತ್ರವನ್ನು ಭಾರತದ ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದ ಹೊರತಾಗಿಯೂ ಯುಎಇ, ಯುಎಸ್, ಯುಕೆ, ಸಿಂಗಾಪುರ್, ಮಲೇಷ್ಯಾ ಮತ್ತು ವಿಶ್ವದ ಇತರೆ ಭಾಗಗಳಲ್ಲಿಯೂ 'ಜೈಲರ್' ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ 375 ಕೋಟಿ ರೂಪಾಯಿ ದಾಟಿರುವ ಈ ತಮಿಳು ಸಿನಿಮಾ ಈವರೆಗಿನ ಅನೇಕ ದಾಖಲೆಗಳನ್ನು ಸರಿಗಟ್ಟಿವೆ.
8ನೇ ದಿನದ ಕಲೆಕ್ಷನ್: 'ಜೈಲರ್' ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುವುದರೊಂದಿಗೆ, ಕಲೆಕ್ಷನ್ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದೆ. ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ, ಚಿತ್ರವು ಎಂಟನೇ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ ಸರಿಸುಮಾರು 10 ಕೋಟಿ ರೂಪಾಯಿ ಗಳಿಸಿದೆ. ಇದು ಚಿತ್ರ ಬಿಡುಗಡೆಯಾದ ನಂತರ ಅತ್ಯಂತ ಕಡಿಮೆ ಗಳಿಕೆಯಾಗಿದೆ. ಆದರೂ ಬಿಡುಗಡೆಯಾಗಿ ಒಂದು ವಾರ ಕಳೆದರೂ ಎರಡಂಕಿಯಲ್ಲಿ ಚಿತ್ರ ಕಲೆಕ್ಷನ್ ಮಾಡುತ್ತಿರುವುದು ಗಮನಾರ್ಹ. ಇನ್ನು ಭಾರತದಲ್ಲಿ ಈ ಚಿತ್ರವು ಒಟ್ಟು 235.65 ಕೋಟಿಗೂ ಹೆಚ್ಚು ಗಳಿಸಿದೆ.
ಮೊದಲ ದಿನ 48.35 ಕೋಟಿ ರೂಪಾಯಿ ಗಳಿಸುವುದರೊಂದಿಗೆ ಜೈಲರ್ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಅಬ್ಬರದ ಪ್ರಯಾಣ ಆರಂಭಿಸಿತು. ಎರಡನೇ ದಿನದಂದು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಲಾ ಶಂಕರ್, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಒಎಂಜಿ 2 ಮತ್ತು ಸನ್ನಿ ಡಿಯೋಲ್ ನಟನೆಯ ಗದರ್ 2 ಚಿತ್ರಗಳು ಬಿಡುಗಡೆಯಾದವು. ಸದ್ಯ ಈ ಮೂರು ಸಿನಿಮಾಗಳು ಜೈಲರ್ಗೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ನೀಡುತ್ತಿದೆ. ಅದರಲ್ಲೂ ದಕ್ಷಿಣದಲ್ಲಿ ಜೈಲರ್ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಉತ್ತರದಲ್ಲಿ ಗದರ್ 2 ಮೇಲುಗೈ ಸಾಧಿಸಿದೆ.
ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಜೈಲರ್ನಲ್ಲಿ ನಾಯಕಿಯಾಗಿ ಬಹುಭಾಷಾ ತಾರೆ ತಮನ್ನಾ ಭಾಟಿಯಾ ನಟಿಸಿದ್ದಾರೆ. ಜೊತೆಗೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಚಿತ್ರತಂಡ ಯಶಸ್ಸಿನ ಖುಷಿಯಲ್ಲಿದೆ.
ಇದನ್ನೂ ಓದಿ: ಜೈಲರ್ ಹವಾ.. ರಜನಿಕಾಂತ್ ಅಭಿಮಾನಿ ಜಪಾನ್ ರಾಯಭಾರಿಯಿಂದ ಕಾವಾಲಾ ಹಾಡಿಗೆ ಭರ್ಜರಿ ಡ್ಯಾನ್ಸ್!