ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಇಂದು ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಈಗಾಗಲೇ ಹಲವು ಶಾಸ್ತ್ರಗಳು, ಮದುವೆ ಮುಂಚಿನ ಈವೆಂಟ್ಗಳು ನಡೆದಿವೆ. ಇಂದು ಮದುವೆಯ ಸಂಭ್ರಮ ಮನೆ ಮಾಡಿದೆ. ವಿವಾಹದ ಫೋಟೋ - ವಿಡಿಯೋಗಳನ್ನು ಅಭಿಮಾನಿಗಳು, ನೆಟ್ಟಿಗರು ನಿರೀಕ್ಷಿಸಿದ್ದಾರೆ. ಮದುವೆ ಮುನ್ನದ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ಇರಾ ಖಾನ್ ಅವರು ತಮ್ಮ ದೀರ್ಘಕಾಲದ ಗೆಳೆಯ, ನಿಶ್ಚಿತ ವರ ನೂಪುರ್ ಶಿಖರೆ ಅವರೊಂದಿಗೆ ಇಂದು ವಿವಾಹ ಆಗಲಿದ್ದಾರೆ. ನಿನ್ನೆ, ಮಂಗಳವಾರ ರಾತ್ರಿ, ಅಮೀರ್ ಮತ್ತು ಮಗ ಜುನೈದ್ ಅವರು ಇರಾ ಅವರ ಮೆಹೆಂದಿ ಸಮಾರಂಭಕ್ಕೆ ಆಗಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಜುನೈದ್ ಮತ್ತು ಇರಾ ಅವರು ಅಮೀರ್ ಖಾನ್ ಮತ್ತು ರೀನಾ ದತ್ತಾ ದಂಪತಿ (ವಿಚ್ಛೇದಿತ)ಯ ಮಕ್ಕಳು. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಎರಡು ವಿವಾಹ ಆಗಿ, ವಿಚ್ಛೇದನ ಪಡೆದಿರೋದು ನಿಮಗೆ ತಿಳಿದಿರುವ ವಿಚಾರವೇ. ಅದಾಗ್ಯೂ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಅಪರೂಪಕ್ಕೆ ತಮ್ಮ ವಿಚ್ಛೇದಿತ ಪತ್ನಿಯರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇರಾ ಖಾನ್ ಮದುವೆಗೆ ಸಂಪೂರ್ಣ ಕುಟುಂಬ ಒಟ್ಟುಗೂಡಿ, ಸಿದ್ಧತೆ ನಡೆಸಿದೆ.
ಆನ್ಲೈನ್ನಲ್ಲಿ ವೈರಲ್ ಆಗುತ್ತಿರುವ ಮತ್ತೊಂದು ವಿಡಿಯೋದಲ್ಲಿ, ಅಮೀರ್ ಖಾನ್ ಅವರ ಎರಡನೇ ಪತ್ನಿ (ವಿಚ್ಛೇದಿತ) ಕಿರಣ್ ರಾವ್ ಮತ್ತು ಮಗ ಆಜಾದ್ ಕೂಡ ಕಾರಿನಲ್ಲಿ ಆಗಮಿಸಿರೋದನ್ನು ಕಾಣಬಹುದು. ತಾಯಿ ಮಗ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಅಮೀರ್ ಪಾಪರಾಜಿಗಳ ಕ್ಯಾಮರಾಗೆ ಬಹಳ ಖುಷಿಯಿಂದ ಪೋಸ್ ಕೊಟ್ಟಿದ್ದು, ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಛಾಯಾಗ್ರಾಹಕರನ್ನು ಕಂಡೊಡನೆ ಕೈ ಬೀಸಿ ಮುಗುಳ್ನಕ್ಕರು.
ಮಂಗಳವಾರದಂದು ಮುಂಬೈ ನಗರದಲ್ಲಿ ವಧು ಇರಾ ಖಾನ್ ಸಹ ಕಾಣಿಸಿಕೊಂಡಿದ್ದಾರೆ. ವಧು ವೈಟ್ ಆ್ಯಂಡ್ ಬ್ಲ್ಯಾಕ್ ಪ್ರಿಂಟೆಡ್ ಟಾಪ್, ಸ್ಕರ್ಟ್ ಧರಿಸಿದ್ದರು. ಬ್ಯಾಗ್ ಒಂದನ್ನು ಹಿಡಿದಿದ್ದರು. ನೋ ಮೇಕ್ ಅಪ್ ಲುಕ್ನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ವಧುವಿನ ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಿದ್ದಂತೆ, ಇರಾ ಮುಗುಳ್ನಕ್ಕರು.
ಇದನ್ನೂ ಓದಿ: ಡೇಟಿಂಗ್ ವದಂತಿಗೆ ತುಪ್ಪ ಸುರಿದ ಅದಿತಿ ರಾವ್ ಹೈದರಿ-ಸಿದ್ಧಾರ್ಥ್
2022ರ ನವೆಂಬರ್ 18 ರಂದು ಈ ಜೋಡಿ ಆಪ್ತ ಸ್ನೇಹಿತರು, ಕುಟುಂಬ ಸದಸ್ಯರ ಎದುರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಪ್ತರಿಗಾಗಿ ಸ್ಪೆಷಲ್ ಪಾರ್ಟಿ ಆಯೋಜಿಸಿದ್ದರು. ಅಮೀರ್, ರೀನಾ ದತ್ತಾ, ಕಿರಣ್ ರಾವ್, ನಟಿ ಫಾತಿಮಾ ಸನಾ ಶೇಖ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: ನಾಳೆ ಅಮೀರ್ ಖಾನ್ ಮಗಳ ಮದುವೆ: ಇರಾ-ನೂಪುರ್ ನಿವಾಸಕ್ಕೆ ವಿಶೇಷ ದೀಪಾಲಂಕಾರ
ಈ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮೂಲಕ ಇರಾ ಖಾನ್ ತಮ್ಮ ಮದುವೆಯ ದಿನಾಂಕವನ್ನು ಖಚಿತಪಡಿಸಿದ್ದರು. ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ಸಮಾರಂಭ ಜರುಗುತ್ತಿದೆ. ಮದುವೆ ಬಳಿಕ, ಕೆಲವೇ ದಿನಗಳೊಳಗೆ ದೆಹಲಿ ಮತ್ತು ಜೈಪುರದಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ ಎಂಬ ಮಾಹಿತಿ ಇದೆ. ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಮೀರ್, ತಾವು ಭಾವನಾತ್ಮಕ ಸ್ವಭಾವದವರಾದ ಹಿನ್ನೆಲೆ ಮದುವೆ ಸಂದರ್ಭ ಕಣ್ಣೀರಿಡಲಿದ್ದೇನೆ ಎಂದು ತಿಳಿಸಿದ್ದರು.