ಬ್ಯಾನರ್ಗೆ ಹಾಲಿನಭಿಷೇಕ, ಡಿಜೆ ಡ್ಯಾನ್ಸ್, ಪಟಾಕಿ ಸಿಡಿಸುವಿಕೆ, ಸಿಹಿ ಹಂಚಿ ಸಂಭ್ರಮ ಜತೆಗೆ ವಿಶೇಷವಾಗಿ ನಿಶ್ಚಿತಾರ್ಥ ಮಾಡಿಕೊಂಡ ಫ್ಯಾನ್ಸ್... ಈ ಎಲ್ಲಾ ಸುಂದರ ಘಟನೆಗಳಿಗೆ ಗುರುವಾರ ತಮಿಳುನಾಡು ಸಾಕ್ಷಿಯಾಯಿತು. ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಲಿಯೋ' ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಅಭಿಮಾನಿಗಳು, ಸಿನಿಪ್ರಿಯರು ಥಿಯೇಟರ್ನತ್ತ ಮುಗಿಬಿದ್ದಿದ್ದಾರೆ. ಬೆಳಗ್ಗೆಯಿಂದಲೇ ಚಿತ್ರಮಂದಿರಗಳ ಮುಂಭಾಗದಲ್ಲಿ ದಳಪತಿ ಫ್ಯಾನ್ಸ್ ಸಂಭ್ರಮಾಚರಣೆ ಜೋರಾಗಿಯೇ ಇದೆ.
ನಿಶ್ಚಿತಾರ್ಥ ಮಾಡಿಕೊಂಡ ಫ್ಯಾನ್ಸ್: 'ಲಿಯೋ' ಸಿನಿಮಾ ಪ್ರದರ್ಶನದ ವೇಳೆ ದಳಪತಿ ವಿಜಯ್ ಅಭಿಮಾನಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುದುಕೊಟ್ಟೈ ಜಿಲ್ಲೆಯ ಮಪ್ಪಿಲ್ಲಯಾರ್ಕುಲಂ ಪ್ರದೇಶದ ವೆಂಕಟೇಶ್ ಮತ್ತು ಪುದುಕೊಟ್ಟೈ ಉತ್ತರ 3ನೇ ಬೀದಿಯ ಮಂಜುಳಾ ಎಂಬವರು ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರು ಕೂಡ ದಳಪತಿ ವಿಜಯ್ ಅವರ ಕಟ್ಟಾಭಿಮಾನಿಗಳು. ಇಂದು 'ಲಿಯೋ' ಚಿತ್ರವು ಪುದುಕೊಟ್ಟೈನ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದ್ದ ವೇಳೆ ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರೆ. ನಾಳೆ (ಅ.20) ಪೋಷಕರ ಒಪ್ಪಿಗೆ ಮೇರೆಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.
ಇದನ್ನೂ ಓದಿ: ನಾಳೆ ಲಿಯೋ ಬಿಡುಗಡೆ: ಆದರೆ ವಿಜಯ್ ಅಭಿಮಾನಿಗಳಿಗಿದೆ ಬೇಸರದ ಸಂಗತಿ! ಏನದು?
ಫ್ಯಾನ್ಸ್ ಸಂಭ್ರಮಾಚರಣೆ: ಕೇರಳ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮತ್ತು ಅಮೆರಿಕಾ, ಮಲೇಷ್ಯಾ ಇತರೆ ವಿದೇಶಗಳಲ್ಲಿ 'ಲಿಯೋ' ಮುಂಜಾನೆ 4 ಗಂಟೆಗೆ ಬಿಡುಗಡೆಯಾಗಿದೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಬೆಳಗ್ಗೆ 9 ಗಂಟೆಗೆ ಶೋ ಪ್ರಾರಂಭಗೊಂಡಿತ್ತು. ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಅವರ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿಯೇ ಇತ್ತು. ತಮಿಳುನಾಡಿನ ವಿವಿಧ ಚಿತ್ರಮಂದಿರಗಳಲ್ಲಿ ಆಸನಗಳನ್ನು ಕಾಯ್ದಿರಿಸಿದ್ದ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಥಿಯೇಟರ್ಗಳಿಗೆ ಮುಗಿಬೀಳುತ್ತಿರುವುದು ಕಂಡು ಬಂತು.
ತಿರುಚ್ಚಿ ಜಿಲ್ಲೆಯಲ್ಲಿ ಬ್ಲ್ಯಾಕ್ ಡ್ರೆಸ್ ಧರಿಸಿ ವಿಜಯ್ ಫ್ಯಾನ್ಸ್ ಗ್ರೂಪ್ ಡ್ಯಾನ್ಸ್ ಮಾಡಿದರು. ಕೊಯಮತ್ತೂರು ಜಿಲ್ಲೆಯ ರಸ್ತೆಗಳಲ್ಲಿ ನಟನ ಅಭಿಮಾನಿಗಳು ನೂರಾರು ತೆಂಗಿನಕಾಯಿಗಳನ್ನು ಒಡೆದರು. ಥೇಣಿ ಜಿಲ್ಲೆಯಲ್ಲಿ ಓಡುತ್ತಿರುವ ಕಾರಿನಲ್ಲಿ ಕುಳಿತ ಸಣ್ಣ ಹುಡುಗರು ಡ್ಯಾನ್ಸ್ ಮಾಡಿದರು. ರಾಜ್ಯಾದ್ಯಂತ ಲಿಯೋ ಬಿಡುಗಡೆಯ ಸಂಭ್ರಮ ಜೋರಾಗಿಯೇ ಇದೆ.
ಇದೇ ವೇಳೆ 'ಲಿಯೋ' ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಚೆನ್ನೈನ ಕ್ರೋಮ್‌ಪೇಟ್‌ನಲ್ಲಿರುವ ವೆಟ್ರಿ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದರು. ದಳಪತಿ 68 ನಿರ್ದೇಶಕ ವೆಂಕಟ್ ಪ್ರಭು, ನಟ ವೈಭವ್ ಮತ್ತು ತಂಡ, ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಹಾಗೂ ಅವರ ಕುಟುಂಬ ಮತ್ತು ನಟಿ ಕೀರ್ತಿ ಸುರೇಶ್ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಲಿಯೋ ಚಿತ್ರವನ್ನು ವೀಕ್ಷಿಸಿದರು.
ಇದನ್ನೂ ಓದಿ: ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ