ಬೆಂಗಳೂರು: ದಿ. ನಟ ಪುನೀತ್ ರಾಜ್‍ಕುಮಾರ್ ಅವರನ್ನು ಒಬ್ಬ ನಟನಾಗಿ, ಒಬ್ಬ ಕನ್ನಡಿಗನಾಗಿ, ಒಬ್ಬ ಸಜ್ಜನ ವ್ಯಕ್ತಿಯಾಗಿ ನಾನು ನೋಡಿದ್ದೇನೆ. ಅಪ್ಪು ಅಥವಾ ಪುನೀತ್ ಅಂತಾ ಕರೆಯೋದಿಕ್ಕೆ ನನಗೆ ಆಗಲ್ಲ. ಲೋಹಿತ್ ಎಂದು ಅವರನ್ನು ಕರೆಯುತ್ತಿದ್ದೆ ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ತಿಳಿಸಿದರು.
ನಿನ್ನೆ ಅರಮನೆ ಮೈದಾನದಲ್ಲಿ ಪುನೀತ್ ರಾಜ್‍ಕುಮಾರ್ ಪುನೀತ ಪರ್ವ ಹೆಸರಿನಲ್ಲಿ ನಡೆದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮ ವಿಶೇಷವಾಗಿ ಗಮನ ಸೆಳೆದಿದೆ. ದಕ್ಷಿಣ ಚಿತ್ರರಂಗದ ತಾರೆಗಳು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಭಿಮಾನಿಗಳ ಸಮಾಗಮ ಆಗಿತ್ತು. ಇನ್ಫೋಸಿಸ್ ಫೌಂಡೇಷನ್ನ ಮುಖ್ಯಸ್ಥೆ ಸುಧಾಮೂರ್ತಿ ಅವರು ವೇದಿಕೆಯಲ್ಲಿ ಅಪ್ಪು ಬಗ್ಗೆ ಮಾತನಾಡಿದರು.
ನಾವು ರಾಜ್ ಕುಮಾರ್ ಭಕ್ತರು: ಒಮ್ಮೆ ಕೊಲಂಬೊ ಏರ್ ಪೋರ್ಟ್ನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದರು. ಸಿನಿಮಾದವರು ತುಂಬಾ ಜನ ಇದ್ದರು, ಅಭಿಮಾನಗಳೂ ಇದ್ದರು. ಆದರೂ ಲೋಹಿತ್ ಬಂದು ನನ್ನ ಕಾಲಿಗೆ ನಮಸ್ಕರಿಸಿದರು. ಈ ಸರಳತೆ ರಾಜ್ ಕುಮಾರ್ ಕುಟುಂಬದಲ್ಲೇ ಇದೆ. ಚಲಿಸುವ ಮೋಡಗಳು ಹಾಗೂ ಭಕ್ತ ಪ್ರಹ್ಲಾದ ಸಿನಿಮಾಗಳನ್ನು ನೋಡಿದ್ದೆ. ಜೊತೆಗೆ ರಾಜಕುಮಾರ ಚಿತ್ರ ನೋಡಿದ್ದೆ. ನಮ್ಮ ಜನರೇಶನ್ನವ್ರು ಪುನೀತ್ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜ್ ಕುಮಾರ್ ಸಿನಿಮಾಗಳನ್ನು ಹೆಚ್ಚಾಗಿ ನೋಡಿದ್ದೇವೆ. ನಾವು ರಾಜ್ ಕುಮಾರ್ ಭಕ್ತರು ಅಂತಾ ಸುಧಾಮೂರ್ತಿ ಅವರು ತಿಳಿಸಿದರು.
ಇದನ್ನೂ ಓದಿ: 'ಅಪ್ಪು ಅಪ್ಪುಗೆಯಿಂದ ಅದೃಷ್ಟವಂತನಾದೆ' - ಕ್ರೇಜಿಸ್ಟಾರ್ ರವಿಚಂದ್ರನ್
ಪುನೀತ್ ಅವರಿಗೆ ಬಾಲ್ಯದಲ್ಲಿ ಲೋಹಿತ್ ಎಂಬ ಹೆಸರು ಇತ್ತು. ನಂತರ ಅದನ್ನು ಪುನೀತ್ ಎಂದು ಬದಲಾಯಿಸಲಾಗಿತ್ತು. ಆದರೆ, ಸುಧಾಮೂರ್ತಿ ಮಾತ್ರ ಪುನೀತ್ ಅವರನ್ನು ಲೋಹಿತ್ ಎಂದೇ ಕರೆಯುತ್ತಿದ್ದರು.