ಕನ್ನಡ ಚಿತ್ರರಂಗದಲ್ಲಿ ಟೈಟಲ್, ಟೀಸರ್ನಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ 'ಇನಾಮ್ದಾರ್'. ಇದೀಗ ಚಿತ್ರವು ಮತ್ತೊಂದು ವಿಚಾರದಲ್ಲಿ ಟ್ರೆಂಡಿಂಗ್ನಲ್ಲಿದೆ. ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿರುವ ಹಾಗೂ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿರುವ ಈ ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ 'ಸಿಲ್ಕು ಮಿಲ್ಕು' ಹಾಡಿನಿಂದ ಗಮನ ಸೆಳೆಯುತ್ತಿರುವ ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ವಿಭಿನ್ನವಾಗಿ 'ಇನಾಮ್ದಾರ್' ಪ್ರಮೋಷನ್: ಚಿತ್ರತಂಡ ಹಲವು ದಿನಗಳಿಂದ ಪಾತ್ರ ಪರಿಚಯವನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿದ್ದು, ಒಂದಿಷ್ಟು ಕುತೂಹಲ ಕೆರಳಿಸಿದೆ. ಚಿತ್ರತಂಡ ವಿಭಿನ್ನವಾದ ಇನ್ನೊಂದು ಪ್ರಮೋಷನ್ ಆಕ್ಟಿವಿಟಿಗೆ ಕೈ ಹಾಕಿದ್ದು, ಈ ವಿಡಿಯೋ ಇದೀಗ ಸಾಕಷ್ಟು ವೈರಲಾಗುತ್ತಿದೆ.
ಹೌದು, ಟೀ ಅಂಗಡಿ ಹತ್ತಿರ ಟೀ ಕುಡಿತಿರೋ ಯಶ್ ಅಭಿಮಾನಿಗಳಿಬ್ಬರು ನಟ ರಂಜನ್ ಛತ್ರಪತಿ ಅವರನ್ನು ನೋಡಿ ಯಶ್ ಎಂದು ಭಾವಿಸಿ ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಾರೆ. ಆದರೆ 'ಇನಾಮ್ದಾರ್' ನಾಯಕ ಯಶ್ ಅಭಿಮಾನಿಗಳ ಹಾವಭಾವ, ಅವರ ಮಾತುಗಳನ್ನು ಆಲಿಸಿ ತಮ್ಮ ಚಿತ್ರದ ಪ್ರಮೋಷನ್ಗೆ ಈ ಹುಡುಗರನ್ನು ತಮ್ಮ ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗ್ತಾರೆ. ಇದು ಸಿನಿಮಾದ ಪ್ರಮೋಷನ್ ವಿಡಿಯೋ.
ಇದನ್ನೂ ಓದಿ: ನಿಖಿಲ್ ಕುಮಾರ್ಸ್ವಾಮಿ ಶೂಟಿಂಗ್ ಸೆಟ್ಗೆ ಸರ್ಪ್ರೈಸ್ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ
ನಟ ಯಶ್ರಂತೆ ಕಾಣುತ್ತಿರುವ ನಟ ರಂಜನ್ ಛತ್ರಪತಿ ಇದೀಗ 'ಇನಾಮ್ದಾರ್' ಸಿನಿಮಾದಲ್ಲಿ ಕಪ್ಪು ಮತ್ತು ಬಿಳಿ ಜನಾಂಗದ ಘರ್ಷಣೆಗೆ ಸಾಕ್ಷಿ ಆಗುವಂತೆ ಬಣ್ಣ ಹಚ್ಚಿ ವರ್ಣಭೇದದ ಕಥೆ ಹೇಳಲು ಬರುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ 'ಇನಾಮ್ದಾರ್' ಸಿನಿಮಾದ ಟ್ರೈಲರ್ ಬಿಡುಗಡೆ ಯಾವಾಗ? ಎಂದು ತಿಳಿಸಲು ಮಾಡಿರುವ ವಿಡಿಯೋ ಇದಾಗಿದೆ. ರಂಜನ್ ಛತ್ರಪತಿ ಜೋಡಿಯಾಗಿ ಭೂಮಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಸಿಲ್ಕು ಮಿಲ್ಕು ಹಾಡು ಬಿಡುಗಡೆ: ಕೆಲವು ತಿಂಗಳ ಹಿಂದೆ ಚಿತ್ರತಂಡ ಸಿನಿಮಾದ ಮೊದಲ ಹಾಡು 'ಸಿಲ್ಕು ಮಿಲ್ಕು' ಬಿಡುಗಡೆ ಮಾಡಿತ್ತು. ಕೊಪ್ಪದಲ್ಲಿ ಸಾವಿರಾರು ಜನರ ಮುಂದೆ ಅಲ್ಲಿನ ಮಕ್ಕಳ ಕೈಯಲ್ಲಿ ಈ ಹಾಡು ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ದಕ್ಷಿಣ ಭಾರತದ ನಟಿ ಏಸ್ತಾರ್ ನೆರೋನಾ ಈ ಹಾಡಿಗೆ ಸೊಂಟ ಬಳುಕಿಸಿದ್ದಾರೆ.
ಪ್ರಮೋದ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಚಿತ್ರಕ್ಕೆ ಸಂದೇಶ್ ಶೆಟ್ಟಿ ನಿರ್ದೇಶನವಿದೆ. ಯುವ ನಟ ರಂಜನ್ ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಿದೆ ಚಿತ್ರತಂಡ.
ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ವೀಕ್ಷಿಸಿಲ್ವಾ.. ನೋಡಿಲ್ಲವಾದ್ರೆ ಒಟಿಟಿಯಲ್ಲಿ ಲಭ್ಯ