ಹೈದರಾಬಾದ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ತಮ್ಮ ಇಬ್ಬರು ಮಕ್ಕಳಾದ ಇಬ್ರಾಹಿಂ ಅಲಿ ಖಾನ್ ಮತ್ತು ತೈಮೂರ್ ಅಲಿ ಖಾನ್ ಅವರೊಂದಿಗೆ ಶುಕ್ರವಾರ ರಾತ್ರಿ ಮುಂಬೈನಲ್ಲಿ 'ಆದಿಪುರುಷ್' ಚಿತ್ರ ವೀಕ್ಷಿಸಿದರು. ಬಿಡುಗಡೆಯಾದ ಮೊದಲ ದಿನವೇ ತಂದೆ-ಮಕ್ಕಳು ಥಿಯೇಟರ್ಗೆ ಆಗಮಿಸಿ ಚಿತ್ರ ವೀಕ್ಷಣೆ ಮಾಡಿದರು. ಅವರ ಆಗಮನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಚಿತ್ರ ವೀಕ್ಷಣೆ ನಿಮಿತ್ತ ಸುಮಾರು 2 ಲಕ್ಷ ರೂ. ಮೌಲ್ಯದ ದುಬಾರಿ ಬಟ್ಟೆ ಧರಿಸಿ ಬಂದಿದ್ದ ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ನೋಡಿದ ನೆಟಿಜನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವರು ಕಾಮೆಂಟ್ ಮಾಡಿ 'ಆದಿಪುರುಷ್' ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಇದೇ ವೇಳೆ ಮನವಿ ಕೂಡ ಮಾಡಿಕೊಂಡಿದ್ದಾರೆ.
ಸೈಫ್ ಅಲಿ ಖಾನ್ ಅವರು ತಮ್ಮ ಕಾರಿನಿಂದ ಹೊರಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅವರು ಆಕಾಶ ನೀಲಿ ಬಣ್ಣದ ಟೀ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದರೆ, ಹಿರಿಯ ಪುತ್ರ ಇಬ್ರಾಹಿಂ ಅಲಿ ಖಾನ್ ಕಪ್ಪು ಬಣ್ಣದ ದುಬಾರಿ ಬೆಲೆಯುಳ್ಳ ಬ್ರಾಂಡೆಡ್ ಬಟ್ಟೆ ಹೂಡಿ ಧರಿಸಿ ಬಂದಿದ್ದರು. ಮತ್ತೊಬ್ಬ ಕಿರಿಯ ಪುತ್ರ ತೈಮೂರ್ ಅಲಿ ಖಾನ್ ನೀಲಿ ಬಣ್ಣದ ಶಾರ್ಟ್ ಮತ್ತು ಟೀ-ಶರ್ಟ್ ಜೊತೆಗೆ ಆಗಮಿಸಿದ್ದನು. ಸೈಫ್ ಅಲಿ ಖಾನ್ ಕಾರಿನಿಂದ ಇಳಿದು ಅಭಿಮಾನಿಗಳತ್ತ ಕೈ ಬೀಸುತ್ತಾ ನೇರವಾಗಿ ಚಿತ್ರಮಂದಿರಕ್ಕೆ ತೆರಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನು ಮಗ ತೈಮೂರ್ ಅವರ ದಾದಿಯರ ಜೊತೆ ಚಿತ್ರಮಂದಿರತ್ತ ಬರುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಇಬ್ರಾಹಿಂ ಅಲಿ ಖಾನ್ ಧರಿಸಿದ್ದ ಅತ್ಯಂತ ದುಬಾರಿ ಬೆಲೆಯ ಹೂಡಿ (ಬಟ್ಟೆ) ನೋಡಿದ ನೆಟಿಜನ್‌ಗಳು, ತರಹೇವಾರು ಕಾಮೆಂಟ್ ಮಾಡಿದ್ದಾರೆ. 'ಈ ಜಾಕೆಟ್ ಖರೀದಿ ಮಾಡಲೆಂದು ನಾನು ನನ್ನ ತಂದೆಯನ್ನು 2 ಲಕ್ಷ ರೂ. ಕೇಳಿದರೆ ಅವರು ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, 2 ಒದೆಗಳನ್ನು ಮಾತ್ರ ಖಂಡಿತ ಕೊಡುತ್ತಾರೆ' ಎಂದು ನೆಟಿಜನ್ವೊಬ್ಬರು ಹಾಸ್ಯ ಮಾಡಿದ್ದಾರೆ. 'ನಿಮ್ಮ ಬಳಿ ಇರುವ ಹೂಡಿ ನನ್ನ ಬಳಿಯೂ ಇದೆ. ಆದರೆ, ಇದರ ಬೆಲೆ ಕೇವಲ 750 ರೂ'. ಎಂದು ಮತ್ತೊಬ್ಬ ನೆಟಿಜನ್ ಕಾಮೆಂಟ್ ಮಾಡಿದ್ದಾರೆ. "ಇದು ಆರ್ಯನ್ ಖಾನ್ ಬ್ರಾಂಡ್'' ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ. ಹಲವರು ಇಬ್ರಾಹಿಂ ಧರಿಸಿದ್ದ ದುಬಾರಿ ಬೆಲೆಯ ಬಟ್ಟೆ ಬಗ್ಗೆಯೇ ಕಾಮೆಂಟ್ ಮಾಡಿರುವುದನ್ನು ಗಮನಿಸಬಹುದು.
ಇನ್ನು ಶುಕ್ರವಾರರಷ್ಟೇ ಬಿಡುಗಡೆಯಾದ ಆದಿಪುರುಷ್ ಚಿತ್ರ 2023ರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ತೆರೆಕಂಡ ಮೊದಲ ದಿನವೇ ಸುಮಾರು 140 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ದಕ್ಷಿಣದ ಬಹುಬೇಡಿಕೆ ನಟ ಪ್ರಭಾಸ್ ಮತ್ತೊಂದು ದಾಖಲೆ ಬರೆದಿದ್ದಾರೆ. ಈವರೆಗೆ ಮೊದಲ ದಿನ 100 ಕೋಟಿ ರೂ. ಕಲೆಕ್ಷನ್ ಮಾಡಿರುವ 6 ಸಿನಿಮಾಗಳ ಪೈಕಿ 3 ಪ್ರಭಾಸ್ ನಟಿಸಿರುವ ಚಿತ್ರಗಳೇ ಇವೆ. 'ಬಾಹುಬಲಿ 2', 'ಸಾಹೋ' ನಂತರ 'ಆದಿಪುರುಷ್' ಮೊದಲ ದಿನ 100 ಕೋಟಿ ಬಾಚಿಕೊಂಡ ಸಿನಿಮಾ ಆಗಿ ಹೊಹೊಮ್ಮಿದೆ.
ಓಂ ರಾವುತ್ ನಿರ್ದೇಶನ ಹೇಳಿದ್ದು ರಾಮಾಯಣ ಆಧರಿಸಿರುವ ಆದಿಪುರುಷ್ ನಿನ್ನೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ದೇಶದಲ್ಲಿ 7,000, ಸಾಗರೋತ್ತರ ಪ್ರದೇಶಗಳಲ್ಲಿ 3000 ಸೇರಿದಂತೆ ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ತೆರೆಕಂಡಿದೆ. ಕೆಲವರು ಚಿತ್ರದ ಬಗ್ಗೆ ತಮ್ಮ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಘವ್ ಆಗಿ, ಕೃತಿ ಸನೋನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ಲಂಕೇಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಈ ವರ್ಷ ಭಾರತದಲ್ಲಿ 2D ಮತ್ತು 3D ಸ್ವರೂಪಗಳಲ್ಲಿ ಮತ್ತು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: 'Adipurush' ಸಿನಿಮಾದ ಕೆಲ ದೃಶ್ಯ ಕತ್ತರಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಹಿಂದೂ ಸೇನೆ