ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಡಾಲಿ ಧನಂಜಯ್. ಸದ್ಯ ಹೊಯ್ಸಳ ಸಿನಿಮಾ ಗುಂಗಿನಲ್ಲಿದ್ದಾರೆ ಸ್ಯಾಂಟಲ್ವುಡ್ ನಟ ರಾಕ್ಷಸ. ಕನ್ನಡ ಚಿತ್ರರಂಗದಲ್ಲಿ ಟೀಸರ್ನಿಂದಲೇ ಟಾಕ್ ಆಗುತ್ತಿರುವ ಸಿನಿಮಾವಿದು. ನಟ ಡಾಲಿ ಧನಂಜಯ್ ಸಿನಿಮಾ ಕೆರಿಯರ್ನಲ್ಲಿ 25ನೇ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿರೋ 'ಹೊಯ್ಸಳ' ಚಿತ್ರದ ತಂಡ ಸಿನಿಪ್ರಿಯರಿಗಾಗಿ ಆಗಾಗ್ಗೆ ಚಿತ್ರದ ಅಪ್ಡೇಟ್ ಕೊಡುತ್ತಾ ಬಂದಿದೆ.
ಹೊಯ್ಸಳ ಸಿನಿಮಾ ಹಾಡು ಬಿಡುಗಡೆ: ಇದೀಗ ಹೊಯ್ಸಳ ಚಿತ್ರದ ರೊಮ್ಯಾಂಟಿಂಕ್ ಹಾಡೊಂದು ರಿಲೀಸ್ ಆಗಿದೆ. ಡಾಲಿ ಖಡಕ್ ಪೊಲೀಸ್ ಆಫಿಸರ್ ಅವತಾರದಲ್ಲಿ ಅಭಿನಯಿಸಿರುವುದು ಮಾತ್ರವಲ್ಲದೇ, ತನ್ನ ಮಡದಿಗೆ ಪ್ರೀತಿಯ ನಿವೇದನೆ ಮಾಡಿಕೊಳ್ಳುವ ರೊಮ್ಯಾಂಟಿಕ್ ಪತಿಯಾಗಿಯೂ ಕಾಣಿಸಿಕೊಂಡಿದ್ದಾರೆ.
'ಅರೇ ಇದು ಎಂಥಾ ಭಾವನೆ': ಬಡವ ರಾಸ್ಕಲ್ ಚಿತ್ರದಲ್ಲಿ ಉಡುಪಿ ಹೋಟೆಲು ಹಾಡಿನಿಂದ ಮೋಡಿ ಮಾಡಿದ್ದ ಡಾಲಿ ಧನಂಜಯ್ ಹಾಗೂ ಅಮೃತಾ ಐಯ್ಯಂಗಾರ್ ಅವರೀಗ 'ಅರೇ ಇದು ಎಂಥಾ ಭಾವನೆ' ಎನ್ನುವ ಮೆಲೋಡಿ ಲವ್ ಸಾಂಗ್ನಲ್ಲಿ ಬಹಳ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರೇ ಇದು ಎಂಥಾ ಭಾವನೆ ಹಾಡಿನ ಲಿರಿಕಲ್ ವಿಡಿಯೋ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಇಂದು ಬಿಡುಗಡೆ ಆಗಿದ್ದು, ಗುರುದೇವ್ ಹಾಗೂ ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ನಾವು ಈ ಹಾಡಿನಲ್ಲಿ ನೋಡಬಹುದು. ತನ್ನ ಮಡದಿ, ಮನದರಸಿಗೆ ಮನದಾಳದ ಮಾತುಗಳನ್ನು ಡಾಲಿ ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದಾರೆ.
ಗಾಯಕ ಹರಿಚರಣ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡಿತ್ತು. ಗಣೇಶ್ ನಟನೆಯ ಗೀತಾ ಸಿನಿಮಾವನ್ನು ನಿರ್ದೇಶಿಸಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಬಳಿಕ ಧನಂಜಯ್ ಜೊತೆ ಮತ್ತೊಮ್ಮೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ. ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ: ಹೃದಯಸ್ಪರ್ಶಿ ಬರಹದ ಮೂಲಕ ವಿಶ್ವದ ಮಹಿಳೆಯರಿಗೆ ಶುಭ ಕೋರಿದ ಮಹೇಶ್ ಬಾಬು
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಹೊಂದಿರುವ ನಟರ ಪೈಕಿ ಡಾಲಿ ಧನಂಜಯ್ ಮುಂಚೂಣಿಯಲ್ಲಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿದೆ. ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಜೊತೆ ನಟಿಸಲು ರಾಜಸ್ಥಾನಕ್ಕೆ ಹಾರಲಿದ್ದಾರೆ ಸೌತ್ ಬ್ಯೂಟಿ ನಯನತಾರಾ
ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ ಹೊಯ್ಸಳ ಸಿನಿಮಾ ಮಾರ್ಚ್ 30 ರಂದು ಎಲ್ಲೆಡೆ ತೆರೆ ಕಾಣಲಿದೆ. ಡಾಲಿ ಧನಂಜಯ್ ಅವರ 25ನೇ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳ ನಿರೀಕ್ಷೆ ಕೂಡ ದೊಡ್ಡ ಮಟ್ಟದಲ್ಲಿ ಇದೆ.