ಕೊಚ್ಚಿ (ಕೇರಳ): ಸುದೀಪ್ತೋ ಸೇನ್ ನಿರ್ದೇಶನದ ಸಾಕಷ್ಟು ವಿವಾದ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಾತ್ಯತೀತ ಕೇರಳ ಸಮಾಜವು ಚಿತ್ರವನ್ನು ಒಪ್ಪಿಕೊಳ್ಳುತ್ತದೆ ಎಂದು ಪ್ರತಿಪಾದಿಸಿದೆ. ‘ದಿ ಕೇರಳ ಸ್ಟೋರಿ’ ಕಾಲ್ಪನಿಕ ಕಥೆಯೇ ಹೊರತು ಇತಿಹಾಸವಲ್ಲ. ಹಾಗಿದ್ದ ಮೇಲೆ ಸಮಾಜದಲ್ಲಿ ಮತೀಯತೆ ಮತ್ತು ಸಂಘರ್ಷವನ್ನು ಸೃಷ್ಟಿಸುತ್ತದೆಯೇ? ಅಲ್ಲದೇ ಇಡೀ ಟ್ರೇಲರ್ ಸಮಾಜಕ್ಕೆ ವಿರುದ್ಧವಾಗಿದೆಯೇ? ಎಂದು ಹೈಕೋರ್ಟ್ ಅರ್ಜಿದಾರರನ್ನು ಪ್ರಶ್ನಿಸಿದೆ.
“ಸಿನಿಮಾ ತೆರೆಕಂಡ ಮಾತ್ರಕ್ಕೆ ಏನೂ ಆಗುವುದಿಲ್ಲ. ಕಳೆದ ನವೆಂಬರ್ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಯ್ತು. ಅದರಲ್ಲಿ ಯಾವುದು ಆಕ್ಷೇಪಾರ್ಹವಾಗಿತ್ತು? ಅಲ್ಲಾ ಒಬ್ಬನೇ ದೇವರು ಎಂದು ಹೇಳುವುದರಲ್ಲಿ ತಪ್ಪೇನು? ದೇಶವು ಪ್ರತಿಯೊಬ್ಬ ನಾಗರಿಕನಿಗೂ ಅವರ ಧರ್ಮ ಮತ್ತು ದೇವರನ್ನು ನಂಬುವ ಹಾಗೂ ಧರ್ಮವನ್ನು ವಿಸ್ತರಿಸುವ ಹಕ್ಕನ್ನು ನೀಡಿದೆ. ಹೀಗಿರುವಾಗ ಟ್ರೇಲರ್‌ನಲ್ಲಿ ಏನು ಆಕ್ಷೇಪಾರ್ಹವಾಗಿತ್ತು?" ಎಂದು ಅರ್ಜಿದಾರರನ್ನು ಕೇಳಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ಆಳವಾಗಿಯೇ ಗಮನಿಸಿದೆ.
ಹೀಗಾಗಿ ಹೈಕೋರ್ಟ್ ಅರ್ಜಿದಾರರಲ್ಲಿ ಪ್ರಶ್ನೆಯ ಸುರಿಮಳೆಯನ್ನೇ ಹರಿಸಿದೆ. ''ಈಗಾಗಲೇ ಇಂತಹ ಸಾಕಷ್ಟು ಸಿನಿಮಾಗಳು ಬಂದಿವೆ. ಈ ಹಿಂದೆಯೂ ಹಲವು ಚಿತ್ರಗಳಲ್ಲಿ ಹಿಂದೂ ಸನ್ಯಾಸಿಗಳು ಮತ್ತು ಕ್ರಿಶ್ಚಿಯನ್ ಪಾದ್ರಿಗಳ ವಿರುದ್ಧ ಉಲ್ಲೇಖಗಳಿವೆ. ಇದೆಲ್ಲವನ್ನೂ ನೀವು ಕಾಲ್ಪನಿಕ ರೀತಿಯಲ್ಲಿ ನೋಡಿದ್ದೀರಿ ಅಲ್ಲವೇ? ಹಾಗಿದ್ದ ಮೇಲೆ ಈ ಸಿನಿಮಾದಲ್ಲಿ ಇರುವ ವಿಶೇಷವೇನು? ಈ ಚಿತ್ರ ಸಮಾಜದಲ್ಲಿ ಮತೀಯತೆ ಮತ್ತು ಸಂಘರ್ಷವನ್ನು ಹೇಗೆ ಸೃಷ್ಟಿಸುತ್ತದೆ?" ಎಂದು ನ್ಯಾಯಮೂರ್ತಿ ಎನ್ ನಾಗರೇಶ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿಪಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿದಾರರನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ತಡೆಯೊಡ್ಡಿ ಕೋಯಿಕ್ಕೋಡ್ನಲ್ಲಿ ಪ್ರತಿಭಟನೆ: ವಿಡಿಯೋ..
ಈ ಚಿತ್ರವು ಅಮಾಯಕ ಜನರ ಮನಸ್ಸಿಗೆ ವಿಷವನ್ನು ತುಂಬುತ್ತದೆ. ಕೇರಳದಲ್ಲಿ ಲವ್ ಜಿಹಾದ್ ಇರುವುದನ್ನು ಯಾವುದೇ ಸಂಸ್ಥೆ ಇನ್ನೂ ಪತ್ತೆ ಮಾಡಿಲ್ಲ ಎಂದು ಅರ್ಜಿದಾರರು ಪ್ರತಿವಾದಿಸಿದ್ದಾರೆ. ಆದರೆ ಇದ್ಯಾವುದನ್ನೂ ಒಪ್ಪದ ಕೇರಳ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಲು ಕೋರಿದ್ದ ಅರ್ಜಿಯನ್ನು ನಿರಾಕರಿಸಿದೆ.
ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಇಂದು ಬಿಡುಗಡೆಯಾಗಿದ್ದು, ಕೇರಳದ 20 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ರಾಜ್ಯದ ಕೆಲವೆಡೆ ಥಿಯೇಟರ್ನಲ್ಲಿ ಪ್ರದರ್ಶನಕ್ಕೆ ತಡೆಯೊಡ್ಡಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಚಿತ್ರವನ್ನು ಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ದಿ ಕೇರಳ ಸ್ಟೋರಿ ಕೇರಳದ ಸುಮಾರು 36 ಸಾವಿರ ಹುಡುಗಿಯರ ನಾಪತ್ತೆಯ ಕಥೆ ಎಂದು ಹೇಳಲಾಗಿತ್ತು. ಚಿತ್ರಕ್ಕೆ ಸಾಕಷ್ಟು ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ "ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು" ಚಿತ್ರ ಹೇಳುತ್ತದೆ ಎಂದು ಬದಲಾಯಿಸಲಾಗಿದೆ.
ಇದನ್ನೂ ಓದಿ: ಕೊಚ್ಚಿಯ ಎರಡು ಥಿಯೇಟರ್ನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ರದ್ದು