ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅವರಿಗೆ ನೀಡಲಾಗಿದ್ದ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಮಾನ್ಯತೆ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ಚೇತನ್ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಒಸಿಐ ಮಾನ್ಯತೆಯನ್ನು ರದ್ದುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಚೇತನ್ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿ 2023ರ ಜೂನ್ 2ರವರೆಗೆ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ. ಅಷ್ಟೇ ಅಲ್ಲದೇ, ನ್ಯಾಯಾಂಗದ ಬಗ್ಗೆ ಯಾವುದೇ ಟ್ವೀಟ್ ಮಾಡುವಂತಿಲ್ಲ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಷರತ್ತು ವಿಧಿಸಿದೆ.
ಜೊತೆಗೆ ನ್ಯಾಯಾಂಗದ ವಿರುದ್ಧ ಮತ್ತು ವಿಚಾರಣೆ ಬಾಕಿ ಇರುವಂತಹ ಪ್ರಕರಣಗಳ ಬಗ್ಗೆ ಟ್ವೀಟ್ ಮಾಡುವಂತಿಲ್ಲ. ಪ್ರಸ್ತುತ ಮಾಡಿರುವ ಟ್ವೀಟ್ಗಳನ್ನು ತೆಗೆದು, ಈ ಬಗ್ಗೆ ಮುಂದಿನ ನಾಲ್ಕು ದಿನಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿ, ಈ ಆದೇಶ ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ. ಜೊತೆಗೆ ಷರತ್ತುಗಳನ್ನು ಉಲ್ಲಂಘಿಸಿದರೆ ಮಧ್ಯಂತರ ತಡೆ ರದ್ದಾಗಲಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: 2018ರಲ್ಲಿ ಕೇಂದ್ರ ಸರ್ಕಾರ ಚೇತನ್ ಅವರಿಗೆ ಒಸಿಐ ಕಾರ್ಡ್ ಮಂಜೂರು ಮಾಡಿತ್ತು. ಸಮುದಾಯಗಳ ವಿರುದ್ಧ ದ್ವೇಷ, ಸಾಮರಸ್ಯ ಕದಡುವಿಕೆ, ಕೊರೊನಾ ನಿಯಮಾವಳಿಗಳ ಉಲ್ಲಂಘನೆ, ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ವಲಸೆ ವಿಭಾಗದ ಅಧಿಕಾರಿ, ನಿಮ್ಮ ಒಸಿಐ ಮಾನ್ಯತೆ ಯಾಕೆ ರದ್ದು ಮಾಡಬಾರದು? ಎಂದು ಪ್ರಶ್ನಿಸಿ ಶೋಕಾಸ್ ನೋಟಿಸ್ ನೀಡಿತ್ತು. ನೋಟಿಸ್‌ಗೆ ನಟ ಚೇತನ್ ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಅವರ ಕಾರ್ಡ್ ಅನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು.
ವಿಚಾರಣೆ ವೇಳೆ ಚೇತನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಅರ್ಜಿದಾರರಿಗೆ ಶೋಕಾಸ್ ನೋಟಿಸ್ ನೀಡಿರುವುದರ ಹೊರತಾಗಿ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿತ್ತು. ಅವರ ವಾದ ಆಲಿಸದೇ ಕಾರ್ಡ್ ರದ್ದುಪಡಿಸಲಾಗಿದೆ. ಅಲ್ಲದೇ ಅರ್ಜಿದಾರರು ಮಾಡುತ್ತಿರುವ ಕೃತ್ಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಹೇಗೆ ಹಾನಿಕರ? ಎಂಬುದನ್ನು ಕೇಂದ್ರ ಸರ್ಕಾರ ಸಾಬೀತುಪಡಿಸಬೇಕು. ಇದಕ್ಕೆ ಆಕ್ಷೇಪಣಾ ಹೇಳಿಕೆಗಳನ್ನು ದಾಖಲಿಸುವ ಮೂಲಕ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಕಾರ್ಡ್ ರದ್ದುಪಡಿಸಿದ ಆದೇಶಕ್ಕೆ ನ್ಯಾಯಾಲಯ ತಡೆ ನೀಡದಿದ್ದರೆ ಅರ್ಜಿದಾರರು ಗಡಿಪಾರಾಗುವ ಸಾಧ್ಯತೆ ಇದೆ. ಒಸಿಐ ಕಾರ್ಡ್ ರದ್ದುಗೊಳ್ಳುವುದರಿಂದ ಅವರು ದೇಶದಲ್ಲಿ ಅಕ್ರಮ ವಲಸಿಗರಾಗುತ್ತಾರೆ. ಆದ್ದರಿಂದ ಮುಂದಿನ ವಿಚಾರಣಾ ದಿನದವರೆಗೆ ರಕ್ಷಣೆ ನೀಡಬೇಕೆಂದು ಕೋರಿದ್ದರು.
ಕೇಂದ್ರ ಸರ್ಕಾರದ ಪರವಾಗಿ ಸಹಾಯಕ ಸಾಲಿಸಿಟರ್ ಜನರಲ್ ಶಾಂತಿಭೂಷಣ್, ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್, ನ್ಯಾಯಾಂಗದ ವಿರುದ್ಧವೂ ನಟನಿಗೆ ಟ್ವೀಟ್ ಮಾಡುವ ಅಭ್ಯಾಸ ಇದೆ. ಹೀಗಾಗಿ ಮಧ್ಯಂತರ ರಕ್ಷಣೆ ನೀಡಬಾರದು ಎಂದು ವಾದಿಸಿದ್ದರು.
ಇದನ್ನೂ ಓದಿ: ಕನ್ನಡ ನಟನ ವೀಸಾ ರದ್ದು: ಬೆಂಬಲಕ್ಕೆ ಬಂದ ಕಿಶೋರ್ಗೆ ಚೇತನ್ ಧನ್ಯವಾದ