ಹೈದರಾಬಾದ್ (ತೆಲಂಗಾಣ): ಬಾಲಿವುಡ್ನ ದಿ ಬೆಸ್ಟ್ ಜೋಡಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆಯಂತೆ. ಹೀಗಂತ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆದರೆ, ಈ ಬಗ್ಗೆ ಟೈಗರ್ ಶ್ರಾಫ್ ಆಗಲಿ ಅಥವಾ ದಿಶಾ ಪಟಾನಿ ಆಗಲಿ ಯಾರೂ ಸ್ಪಷ್ಟಪಡಿಸಿಲ್ಲ. ಇನ್ನು ತಾವು ಡೇಟಿಂಗ್ ನಡೆಸುತ್ತಿರುವುದಾಗಿಯೂ ಈ ತಾರಾ ಜೋಡಿ ಯಾವತ್ತೂ ಹೇಳಿಕೊಂಡಿರಲ್ಲ. ಇದರ ನಡುವೆ ಇವರಿಬ್ಬರು ತಮ್ಮ 6 ವರ್ಷದ ಗೆಳೆತನಕ್ಕೆ ಎಳ್ಳು - ನೀರು ಬಿಟ್ಟಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನದಲ್ಲಿ ಇವರು ಬಾಲಿವುಡ್ನ ದಿ ಬೆಸ್ಟ್ ಜೋಡಿ ಅನ್ನಿಸಿಕೊಂಡಿದ್ದರು. ಕಳೆದ 6 ವರ್ಷದಿಂದ ಎಲ್ಲೇ ಹೋದರೂ ಅವರು ಜೋಡಿಯಾಗಿಯೇ ಓಡಾಡುತ್ತಿದ್ದರು. ಇವರ ಒಡನಾಟ ಕಂಡ ನೆಟಿಜನ್ಗಳು ಇವರನ್ನು ಸೂಪರ್ ಜೋಡಿಗೆ ಹೋಲಿಸ ತೊಡಗಿದ್ದರು. ಪಾರ್ಟಿ, ಪ್ರವಾಸ, ಡಿನ್ನರ್, ಮೋಜು - ಮಸ್ತಿ ಅಂತ ಬಂದಾಗಲೂ ಅವರು ಜೋಡಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಸಹಸವಾಗಿ ಇದೊಂದು ಡೇಟಿಂಗ್ ಆಗಿ ಕಾಣಿಸತೊಡಗಿತ್ತು.
ಆದರೆ, ಕಳೆದ ಒಂದು ವರ್ಷಗಳಿಂದ ಈ ಜೋಡಿ ತಮ್ಮ ಡೇಟಿಂಗ್ನಿಂದ ದೂರಾಗಿದ್ದಾರೆ ಎನ್ನುವ ಸುದ್ದಿಯೊಂದು ಇದೀಗ ಕೇಳಿ ಬರುತ್ತಿದೆ. ಇತ್ತೀಚೆಗೆ ಗೆಳೆಯನಿಲ್ಲದೇ ದಿಶಾ ಪಟಾನಿ ಸಿಂಗಲ್ ಆಗಿಯೇ ಮಾಲ್ಡೀವ್ಸ್ಗೆ ತೆರಳಿದ್ದು ನೆಟಿಜನ್ಗಳ ಗಮನಕ್ಕೆ ಬಂದಿತ್ತು.
ಇದೀಗ ಟೈಗರ್ ಅವರ ಜೊತೆಗಿಲ್ಲ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಇದೆಷ್ಟು ನಿಜವೋ ಗೊತ್ತಿಲ್ಲ. ದೂರವಾಗಿರುವ ಬಗ್ಗೆ ಇವರ ಸ್ನೇಹಿತರು ಕೂಡ ಗಮನ ಹರಸಿದ್ದಾರಂತೆ. ಆದರೆ, ಈ ಬ್ರೇಕಪ್ ವದಂತಿ ಕೇಳುತ್ತಿದ್ದಂತೆ ಅವರ ಅಭಿಮಾನಿಗಳು ಬೇಸರ ಹೊರಹಾಕಲಾರಂಭಿಸಿದ್ದಾರೆ.
ಇನ್ನು ನಟಿ ದಿಶಾ ಪಟಾನಿ ತಮ್ಮ ಮುಂಬರುವ ಚಿತ್ರ ಏಕ್ ವಿಲನ್ ರಿಟರ್ನ್ಸ್ ಪ್ರಚಾರದಲ್ಲಿ ನಿರತರಾಗಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಬ್ರೇಕಪ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ಬಗ್ಗೆ ದಿಶಾ ಪಟಾನಿ ಯಾವುದೇ ಸಮರ್ಪಕ ಉತ್ತರ ಕೊಡದೇ ವೈಯಕ್ತಿಕವಾಗಿ ಅವರು ದಿ ಬೆಸ್ಟ್ ಫ್ರೆಂಡ್ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು ಎಂದು ಹೇಳಲಾಗುತ್ತಿದೆ.
ಹಾಗೆಯೆ ಟೈಗರ್ ಸೋಮವಾರ ತಮ್ಮ ಹೊಸ ಚಿತ್ರ 'ಸ್ಕ್ರೂ ಧೀಲಾ' ಅನ್ನು ಘೋಷಿಸಿದ್ದು, ಈ ಬ್ರೇಕಪ್ ಅವರ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರಂತೆ.
ಟಾಲಿವುಡ್ನ ಮೊದಲ ಚಿತ್ರ ಲೋಫರ್ ಸೋತು ಸುಣ್ಣವಾಗಿದ್ದರಿಂದ ದಿಶಾ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿಯುವುದು ಕಷ್ಟ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ಸಿಕ್ಕ ಒಂದು ಸಣ್ಣ ಪಾತ್ರ ಅವರನ್ನು ಎತ್ತರಕ್ಕೆ ತಂದು ನಿಲ್ಲಿಸಿತು.
ವಿಶೇಷವಾಗಿ ಟೈಗರ್ ಜೊತೆ ತೆರೆ ಹಂಚಿಕೊಂಡ ಬಳಿಕ ದಿಶಾ ಬಾಲಿವುಡ್ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದರು. 'ಬಾಘಿ 2' ಮತ್ತು 'ಬಾಘಿ 3' ನಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಟೈಗರ್ ಮತ್ತು ದಿಶಾ ವರದಿಗಳ ಪ್ರಕಾರ ಅಹ್ಮದ್ ಖಾನ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿಯೂ ನಟಿಸಲಿದ್ದಾರಂತೆ.
ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಟಾಲಿವುಡ್ ನಟ ಪ್ರಭಾಸ್ ನಟಿಸಿರುವ ನಾಗ್ ಅಶ್ವಿನ್ ಅವರ ಮುಂಬರುವ ಚಿತ್ರ ಪ್ರಾಜೆಕ್ಟ್ 'ಕೆ'ನಲ್ಲಿಯೂ ಸಹ ದಿಶಾ ಕಾಣಿಸಿಕೊಳ್ಳಲಿದ್ದಾರಂತೆ. ಇತ್ತ ಕಡೆ ಟೈಗರ್ ಅವರು ಕೂಡ ಮುಂದಿನ ಚಿತ್ರ ಗಣಪಥ್: ಭಾಗ 1 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅದರ ಹೊರತಾಗಿ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಬಡೇ ಮಿಯಾನ್ ಚೋಟೆ ಮಿಯಾನ್ ಎಂಬ ಚಿತ್ರದಲ್ಲಿಯೂ ಅವರು ಪರದೆ ಹಂಚಿಕೊಳ್ಳಲಿದ್ದಾರಂತೆ. ಇದು ಕ್ರಿಸ್‌ಮಸ್ 2023 ರ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಬಿಡುಗಡೆ: ಕಿಚ್ಚ ಸುದೀಪ್ ಹೇಳಿದ್ದೇನು?