'ಕರಿ ಹೈದ ಕೊರಗಜ್ಜ' ಚಿತ್ರವು ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ. ಬಾಲಿವುಡ್ ನಟರಾದ ಕಬೀರ್ ಬೇಡಿ, ಶ್ರುತಿ, ಭವ್ಯ, ಹಾಲಿವುಡ್ ಹಾಗೂ ಬಾಲಿವುಡ್ ನಟ ಸಂದೀಪ್ ಸೋಪರ್ಕರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ನಿರ್ದೇಶಕ ಸುಧೀರ್ ಅತ್ತಾವರ್ ನಿರ್ದೇಶನದ ಚಿತ್ರ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಕರಿ ಹೈದ ಕೊರಗಜ್ಜ' ಸಿನಿಮಾದ ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಹಾಗೂ ವಿಸ್ಮಯಗಳು ನಡೆದಿವೆಯಂತೆ. ಹೀಗಾಗಿ ನಿರ್ದೇಶಕ ಸುಧೀರ್ ಅತ್ತಾವರ್ ತಂಡ ಹೊಸ ಕೆಲಸಕ್ಕೆ ಮುಂದಾಗಿದೆ. ಈ ಬಗ್ಗೆ ಕರಿ ಹೈದ ಕೊರಗಜ್ಜ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿದೆ.
ಅರಣ್ಯ ಪ್ರದೇಶದಲ್ಲಿ ಸೆಟ್ ಕೆಲಸ ಸ್ಥಳಾಂತರ: ಹೌದು, ಇಲ್ಲಿವರೆಗೂ ಹೇಳಿರದ ವಿಚಿತ್ರ ಅನುಭವದ ಬಗ್ಗೆ ಚಿತ್ರತಂಡವು ರಿವೀಲ್ ಮಾಡಿದೆ. ಇದು ಘಟಿಸಿದ್ದು ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ನಿರ್ಮಾಣದ ವೇಳೆ. ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳೀಯರು ಅರಿಶಿಣ ನೀರನ್ನು ಪ್ರೋಕ್ಷಿಸಿ, ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಯಾರೂ ಮುಂದೆ ಬರಲಿಲ್ಲ. ಸೆಟ್ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳೀಯರು ತಿಳಿಸಿದರು. ದೈವದ ಮೇಲಿನ ಗೌರವ, ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶಕ್ಕೆ ಸೆಟ್ ಕೆಲಸವನ್ನು ಸ್ಥಳಾಂತರಗೊಳಿಸಲಾಯಿತು ಎನ್ನುತ್ತಿದೆ ಚಿತ್ರತಂಡ.
ಈ ಚಿತ್ರದಲ್ಲಿ ಗುಳಿಗ ದೈವದ ಪಾತ್ರವನ್ನು ನಟ ಹಾಗೂ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅಭಿನಯಿಸಿದ್ದು, ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತಂತೆ. ಈ ಬಗ್ಗೆ ತಿಳಿದವರಲ್ಲಿ ಚಿಂತನ, ಮಂಥನ ನಡೆಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ಅವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದೆ. ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರದೆ ಪಾಳು ಬಿದ್ದಕಾರಣ ದೈವಕ್ಕೆ ಪೂಜೆ, ಪುರಸ್ಕಾರಗಳು ನಡೆಯದಿರುವ ವಿಚಾರ ಗೊತ್ತಾಗಿತ್ತು.
ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆ ನಡೆಸಿದರು. ಈ ಸಮಯದಲ್ಲಿ ಹಿರಿಯ ನಟಿ ಭವ್ಯ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರು ಅಹೋರಾತ್ರಿ ವಿಜೃಂಭಣೆಯಿಂದ ನಡೆದ ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ಧೂರಿಯಾಗಿ ನೆರವೇರಿಸಿತ್ತು ಎಂದು ಚಿತ್ರತಂಡ ತಿಳಿಸಿದೆ.
ಕೊರಗಜ್ಜನ ಕುರಿತಾದ ಸಿನಿಮಾ ಮಾಡಬೇಕೆಂದು ಹಲವಾರು ನಿರ್ಮಾಪಕರು ಕಳೆದ ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ಅವರು ಬಿಗ್ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ : ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ಶಿವಕಾರ್ತಿಕೇಯನ್ - ಸಾಯಿಪಲ್ಲವಿ: ಕಾಶ್ಮೀರದಲ್ಲಿ ಶೂಟಿಂಗ್