ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಬರುತ್ತಿದ್ದು ಚಿತ್ರಗಳು ಸಿನಿಮಾಪ್ರೀಯರ ಮನಸ್ಸು ಕದಿಯುವಲ್ಲಿ ಯಶಸ್ವಿ ಆಗುತ್ತಿವೆ. ಟ್ಯಾಲೆಂಟೆಡ್ ನಿರ್ದೇಶಕರು ಹಾಗೂ ಯುವ ನಟರೂ ಬಣ್ಣದ ಲೋಕದಲ್ಲಿ ಸಾಧಿಸುವ ತುಡಿತದಿಂದ ಹೊಸ ಆಲೋಚನೆಗಳೊಂದಿಗೆ ಚಿತ್ರರಂಗಕ್ಕೆ ಬರ್ತಿದ್ದಾರೆ. ಈಗ ಇಂಥದ್ದೊಂದು ವಿಭಿನ್ನ ಕಂಟೆಂಟ್‌ನೊಂದಿಗೆ ಗುಣ ಎಂಬ ಯುವನಟ ಎಂಜಿನಿಯರಿಂಗ್ ಕೆಲಸಕ್ಕೆ ವಿದಾಯ ಹೇಳಿ ಸರ್ಕಾರಿ ಶಾಲೆ ಹೆಚ್8 ಎಂಬ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ.
ಬಹುತೇಕ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಟೈಟಲ್ ಅನ್ನು ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅನಾವರಣ ಮಾಡಿದ್ದಾರೆ. ಈ ಮೂಲಕ ಹೊಸ ತಂಡವನ್ನು ಬೆಂಬಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, "ಸರ್ಕಾರಿ ಶಾಲೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ಸಿಲ್, ಪೆನ್ಗಳನ್ನು ಕೊಡಿ. ಇನ್ಮುಂದೆ ಅಭಿಮಾನಿಗಳು ಕೂಡ ನಮಗೆ ಶಾಲು, ಹಾರ ತೆಗೆದುಕೊಂಡು ಬರುವುದನ್ನು ಬಿಟ್ಟು ಓದುವ ಮಕ್ಕಳಿಗೆ ಬೇಕಾಗುವ ಬ್ಯಾಗ್, ಪುಸ್ತಕ, ಪೆನ್, ಪೆನ್ಸಿಲ್ಗಳನ್ನು ಕೊಡೋಣ" ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ಇದರ ಜೊತೆಗೆ, ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಾಯಕ ಹಾಗೂ ನಿರ್ದೇಶಕರೂ ಆದ ಗುಣ ಮಾತನಾಡಿ, "ನಾನೊಬ್ಬ ಎಂಜಿನಿಯರ್. ನಮ್ಮ ಚಿತ್ರದ ಒಂದು ಲೈನ್ ಕಥೆಯನ್ನು ರಾಘಣ್ಣ ಅವರಿಗೆ ಹೇಳಿದಾಗ ತುಂಬಾ ಚೆನ್ನಾಗಿದೆ ಎಂದು ಇಷ್ಟಪಟ್ಟರು. ಚಿತ್ರದಲ್ಲಿ ಮಹತ್ವದ ಪಾತ್ರವೊಂದನ್ನು ಅವರು ನಿರ್ವಹಿಸುತ್ತಿದ್ದಾರೆ. ಅವರೇ ಟೈಟಲ್ ಲಾಂಚ್ ಮಾಡಿಕೊಟ್ಟಿದ್ದಾರೆ" ಎಂದು ಹೇಳಿದರು.
"ಡೈಲಾಗ್‌ಗಳ ಮೂಲಕವೇ ವೈರಲ್ ಆದ ನವಾಜ್ ಫಸ್ಟ್ಟೈಮ್ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ 8 ಎನ್ನುವುದರ ಮೇಲೆ ನಮ್ಮ ಇಡೀ ಚಿತ್ರದ ಕಥೆ ನಿಂತಿದೆ. ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸುತ್ತಿದ್ದೇನೆ. ಮೇ ತಿಂಗಳಿಂದ ಶಿವಮೊಗ್ಗ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡುತ್ತಿದ್ದೇವೆ. ಸುಮಾರು 500 ರಿಂದ 800 ಮಕ್ಕಳನ್ನು ಶೂಟಿಂಗ್‌ನಲ್ಲಿ ಬಳಸಿಕೊಳ್ಳಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ನವಾಜ್ ಮಾತನಾಡಿ, ಗುಣ ಅವರು ನಮ್ಮ ಏರಿಯಾದವರು. ನಿಮ್ಮದು ರೋಷ ತುಂಬಿದ ಹುಡುಗನ ಕ್ಯಾರೆಕ್ಟರ್ ಎಂದಷ್ಟೇ ನನ್ನ ಪಾತ್ರದ ಬಗ್ಗೆ ಹೇಳಿದ್ದಾರೆ ಎಂದರು. ನಟ ರುತ್ವಿಕ್ ಮಾತನಾಡಿ, ಈ ಚಿತ್ರದಲ್ಲಿ ಸಿಂಪಲ್ ಮಿಡ್ಲ್ ಕ್ಲಾಸ್ ಹಾಗೂ ಹೋರಾಟದ ಮನೋಭಾವ ಇರುವ ಯುವಕನ ಪಾತ್ರ ಮಾಡುತ್ತಿದ್ದೇನೆ ಎಂದು ಹೇಳಿದರು.
ಗಿರಿಚಂದ್ರ ಪ್ರೊಡಕ್ಷನ್ ಅಡಿಯಲ್ಲಿ ಶ್ರೀನಾಥ್ ಮತ್ತು ಇಂದುಧರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣ್ ಕುಮಾರ್ ಬಿ ಮತ್ತು ಹೇಮಂತ್ ಬಿ.ವಿ.ಸಂಭಾಷಣೆ ಬರೆಯುತ್ತಿದ್ದಾರೆ. ಟೈಟಲ್ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಟೀಸರ್ ಬಿಡುಗಡೆ ಮಾಡುವ ಯೋಚನೆ ಚಿತ್ರ ತಂಡಕ್ಕಿದೆ.
ಇದನ್ನೂ ಓದಿ: 'ಕಾಂತಾರ 2 ಕೆಲಸ ಶುರು, ಮಾರ್ಚ್ನಿಂದ ಫೋನ್ ಆಫ್': ಫಾಲ್ಕೆ ಪ್ರಶಸ್ತಿ ಬಗ್ಗೆ ರಿಷಬ್ ಶೆಟ್ಟಿ ಹೀಗಂದ್ರು!