ಕನ್ನಡ ಚಿತ್ರರಂಗದಲ್ಲಿ ನಗಿಸುವುದರ ಜೊತೆಗೆ ಥಟ್ಟನೆ ಕಣ್ಣೀರು ಬರುವ ಹಾಗೆ ಅಭಿನಯ ಮಾಡುವ ನಟ ಗೋಲ್ಡನ್ ಸ್ಟಾರ್ ಗಣೇಶ್. ಅಭಿನಯ, ಸರಳತೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗಾಳಿಪಟ 2 ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಗಣೇಶ್ ಮೂವರು ಸುಂದರಿಯರೊಂದಿಗೆ ಶೀಘ್ರದಲ್ಲೇ ತ್ರಿಬಲ್ ರೈಡಿಂಗ್ ಹೋಗಲಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಹಂತದಲ್ಲಿರೋ ತ್ರಿಬಲ್ ರೈಡಿಂಗ್ ಸಿನಿಮಾದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಖಾಸಗಿ ಹೋಟೆಲ್ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ನಟ ಗಣೇಶ್, ನಟಿಯರಾದ ರಚನಾ ಇಂದೂರ್, ಮೇಘಾ ಶೆಟ್ಟಿ, ನಿರ್ದೇಶಕ ಮಹೇಶ್ ಗೌಡ, ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್, ನಿರ್ಮಾಪಕರಾದ ವೈ.ಎಮ್. ರಾಮ್ ಗೋಪಾಲ್, ಸಾಹಸ ನಿರ್ದೇಶಕ ಡಿಫ್ರೆಂಟ್ ಡ್ಯಾನಿ, ಗಾಯಕ ಚಂದನ್ ಶೆಟ್ಟಿ ಸೇರಿದಂತೆ ಇಡೀ ತ್ರಿಬಲ್ ರೈಡಿಂಗ್ ಚಿತ್ರತಂಡ ಉಪಸ್ಥಿತಿ ಇತ್ತು.
ಯಟ್ಟ ಯಟ್ಟ ಸಾಂಗ್: ವಿನೋದ್ ಪ್ರಭಾಕರ್ ನಟನೆಯ ರಗಡ್ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಮಹೇಶ್ ಗೌಡ ಅವರೇ ತ್ರಿಬಲ್ ರೈಡಿಂಗ್ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಮಿಡಿ ಜೊತೆಗೆ ಲವ್ ಸ್ಟೋರಿ ಇರುವ ಸಿನಿಮಾ ಇದು. ಚಿತ್ರದ ಯಟ್ಟ ಯಟ್ಟ ಎಂಬ ಹಾಡನ್ನು ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಬರೆದು ಹಾಡಿದ್ದಾರೆ.
ಗಣೇಶ್ ಅವರಿಗೆ ಚಂದನ್ ಶೆಟ್ಟಿ ಬರೆದಿರುವ ಮೂರನೇ ಹಾಡು ಇದು. ಗಣೇಶ್ ಜೋಡಿಯಾಗಿ ಅದಿತಿ ಪ್ರಭುದೇವ, ರಚನಾ ಇಂದೂರ್, ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಮೇಘಾ ಶೆಟ್ಟಿ ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದರೆ, ರಚನಾ ಇಂದೂರ್ ಹಠ ಮಾಡುವ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ.
ನಟ ಗಣೇಶ್ ಮಾತನಾಡಿ, ತ್ರಿಬಲ್ ರೈಡಿಂಗ್ ಅನ್ನೋದು ಫನ್, ಎಂಟರ್ಟೈನ್ಮೆಂಟ್ ಸಿನಿಮಾ. ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಹೋದಾಗ ಏನೆಲ್ಲ ತೊಂದರೆಗಳನ್ನು ಎದುರಿಸಬೇಕಾಗುತ್ತೆ ಅನ್ನೋದು ಈ ಸಿನಿಮಾದ ಕಥೆ. ಅದರಲ್ಲಿ ಮೂರು ಜನ ನಾಯಕಿಯರು ಇದ್ರೆ ಏನಾಗುತ್ತೆ ಅನ್ನೋದನ್ನು ಊಹಿಸಿಕೊಳ್ಳಿ ಎಂದು ತಿಳಿಸಿದರು.
ನಿರ್ದೇಶಕ ಮಹೇಶ್ ಗೌಡ, ಮುಂಗಾರು ಮಳೆ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು. 14 ವರ್ಷ ಆದ ಮೇಲೆ ಈ ಸಿನಿಮಾದ ಕಥೆ ಮಾಡಿಕೊಂಡು ಬಂದರು. ಈ ಸಿನಿಮಾ ನಿಜಕ್ಕೂ ಸಖತ್ ಥ್ರಿಲ್ ಕೊಡುತ್ತೆ. ಸಹಜವಾಗಿ ಸಿನಿಮಾ ಕ್ಲೈಮಾಕ್ಸ್ ನಲ್ಲಿ ಹೀರೋ ಬಂದು ಫೈಟ್ ಮಾಡೋದು ಕಾಮನ್. ಆದರೆ, ತ್ರಿಬಲ್ ರೈಡಿಂಗ್ ಚಿತ್ರದಲ್ಲಿ 20 ನಿಮಿಷ ನಗಿಸುವ ಕ್ಲೈಮಾಕ್ಸ್ ಇದೆ. ಇನ್ನು ಈ ಹಾಡಿಗಾಗಿ ನಾನು ಎರಡು ದಿನ ಪ್ರಾಕ್ಟೀಸ್ ಮಾಡಿ ಡ್ಯಾನ್ಸ್ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನು ಮೂರು ಹಾಡು ಬಿಡುಗಡೆ ಆಗಲಿದೆ ಎಂದರು.
- " class="align-text-top noRightClick twitterSection" data="">
ಇದನ್ನೂ ಓದಿ: ಹಿಟ್ಲರ್ ಕಲ್ಯಾಣದ ಎಜೆ ಈಗ 'ಮಹಾನ್ ಕಲಾವಿದ'
ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ಸೇರಿ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದೆ. ಆನಂದ್ ಅವರ ಕ್ಯಾಮರಾ ವರ್ಕ್ ಇದೆ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಸಾಹಿತ್ಯವಿದೆ.
ನಿರ್ದೇಶನದ ಜೊತೆಗೆ ಮಹೇಶ್ ಗೌಡ ಅವರು ಹಾಡು, ಸಂಭಾಷಣೆ ಕೂಡ ಬರೆದಿದ್ದಾರೆ. ಕೃಪಾಳು ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ವೈ.ಎಮ್. ರಾಮ್ ಗೋಪಾಲ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ನವೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಗಣೇಶ್ ಮೂವರು ಸುಂದರಿಯರೊಂದಿಗೆ ಡ್ಯಾನ್ಸ್ ಮಾಡಿರುವ ಹಾಡು ಸಖತ್ ಸದ್ದು ಮಾಡುತ್ತಿದೆ.