2023ರಲ್ಲಿ ಭಾರತೀಯ ಅನೇಕ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕೋಟಿಗಟ್ಟಲೆ ಹಣವನ್ನು ಕೊಳ್ಳೆ ಹೊಡೆದಿದೆ. 2022ರಲ್ಲಿ ಆರ್ಆರ್ಆರ್ ಮತ್ತು ಕೆಜಿಎಫ್ 2ನಂತಹ ದಕ್ಷಿಣ ಭಾರತದ ಸಿನಿಮಾಗಳು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿವೆ. ಈ ವರ್ಷವು ಬಾಲಿವುಡ್ಗೆ ಸಂತಸವನ್ನು ತಂದಿದೆ. ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾದ 'ಪಠಾಣ್' ಅದ್ಭುತ ಯಶಸ್ಸನ್ನು ಕಂಡಿದೆ. ಸದ್ಯ ಸನ್ನಿ ಡಿಯೋಲ್ ಅವರ 'ಗದರ್ 2' ಚಿತ್ರ ಒಂದು ತಿಂಗಳಿನಿಂದ ವಿಶ್ವದಾದ್ಯಂತ ಹೆಚ್ಚು ಸದ್ದು ಮಾಡುತ್ತಿದ್ದು, ದೊಡ್ಡ ಮಟ್ಟದಲ್ಲಿ ಹಣ ಗಳಿಸಿದೆ.
ದಾಖಲೆ ಬರೆದ ಗದರ್ 2: ಗದರ್ 2 ಆಗಸ್ಟ್ 11 ರಂದು ಬಿಡುಗಡೆಯಾಯಿತು. ಒಂದು ತಿಂಗಳಾದರೂ ಥಿಯೇಟರ್ಗಳಲ್ಲಿ ಓಟ ಮುಂದುವರೆಸಿದೆ. 22 ವರ್ಷಗಳ ನಂತರ ತಾರಾ ಸಿಂಗ್ ಆಗಿ ಮರಳಿದ ಸನ್ನಿ ಡಿಯೋಲ್ ಮೆಗಾ ಬ್ಲಾಕ್ಬಸ್ಟರ್ ಚಿತ್ರ ಗದರ್ 2 ಕಲೆಕ್ಷನ್ ವಿಚಾರದಲ್ಲಿ ಮೆಗಾ ಹಿಟ್ ಸಿನಿಮಾ ಬಾಹುಬಲಿ 2 ಅನ್ನು ಸೋಲಿಸಿದೆ. ಹಿಂದಿ ಅವತರಣಿಕೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ಈ ಮೂಲಕ ಗದರ್ 2 ಮತ್ತೊಂದು ಯಶಸ್ವಿ ದಾಖಲೆಯನ್ನು ಬರೆದಿದೆ.
ಗದರ್ 2 ಬಿಡುಗಡೆಯಾದ 30ನೇ ದಿನದಂದು ಅಂದರೆ, ಸೆಪ್ಟಂಬರ್ 9 ರಂದು 1.20 ಕೋಟಿ ರೂಪಾಯಿ ಗಳಿಸಿದೆ. 29 ದಿನಗಳಲ್ಲಿ ಒಟ್ಟು 510 ಕೋಟಿ ರೂಪಾಯಿ ಗಳಿಸಿತ್ತು. ಬಾಹುಬಲಿ 2 ಚಿತ್ರವು ಹಿಂದಿ ಆವೃತ್ತಿಯಲ್ಲಿ 510.99 ಕೋಟಿ ರೂಪಾಯಿ ವ್ಯವಹಾರ ಮಾಡಿತ್ತು. ಇದೀಗ ಗದರ್ 2 ತನ್ನ 30ನೇ ದಿನದ ಕಲೆಕ್ಷನ್ನೊಂದಿಗೆ ಒಟ್ಟು 511.20 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಬಾಹುಬಲಿ 2 ದಾಖಲೆಯನ್ನು ಪುಡಿಗಟ್ಟಿದೆ.
ಇದನ್ನೂ ಓದಿ: ಗದರ್ 2 ಪಾಕಿಸ್ತಾನಿ ವಿರೋಧಿ ಸಿನಿಮಾ: ಟೀಕೆಗೆ ಸನ್ನಿ ಡಿಯೋಲ್ ಪ್ರತಿಕ್ರಿಯೆ - ಚಿತ್ರವನ್ನು ಮನರಂಜನೆಗಾಗಿ ನೋಡಿ ಎಂದ ನಟ
ಹಿಂದಿ ಆವೃತ್ತಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ಶಾರುಖ್ ಖಾನ್ ಅವರ 'ಪಠಾಣ್' ಹೆಸರಿನಲ್ಲಿದೆ. ಈ ಸಿನಿಮಾವು 525 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಇದೀಗ ಪಠಾಣ್ ನಂತರದ ಸ್ಥಾನವನ್ನು ಗದರ್ 2 ಪಡೆದುಕೊಂಡಿದೆ. ಆದರೆ ಈ ದಾಖಲೆಯನ್ನು ಮುರಿಯಲು ಸೆಪ್ಟಂಬರ್ 7 ರಂದು ಬಿಡುಗಡೆಯಾದ ಜವಾನ್ ಸಿದ್ಧವಾಗಿದೆ. ಈಗಾಗಲೇ ಶಾರುಖ್ ನಟನೆಯ ಜವಾನ್ ವೀಕ್ಷಿಸಲು ಜನರು ಥಿಯೇಟರ್ಗಳಿಗೆ ಮುಗಿಬೀಳುತ್ತಿದ್ದಾರೆ.
2001 ರಲ್ಲಿ ಗದರ್ ಚಿತ್ರದ ಮೊದಲ ಭಾಗ ಬಿಡುಗಡೆ ಆದಾಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೇ ಅಮೀರ್ ಖಾನ್ ಅವರ ಆಸ್ಕರ್ ನಾಮ ನಿರ್ದೇಶಿತ 'ಲಗಾನ್' ಚಿತ್ರಕ್ಕೆ ಪೈಪೋಟಿ ಕೊಟ್ಟು ದೊಡ್ಡ ಹೆಸರು ಮಾಡಿತ್ತು. ಇದೀಗ ಗದರ್ 2ನಲ್ಲಿ ಸನ್ನಿ ಡಿಯೋಲ್ ಅವರನ್ನು ಆ್ಯಕ್ಷನ್ ಅವತಾರದಲ್ಲಿ ಪರಿಚಯಿಸಲಾಗಿದೆ. ಈ ಸೀಕ್ವೆಲ್ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಾಣುತ್ತಿದೆ. ಬಿಡುಗಡೆಯಾಗಿ ಒಂದು ತಿಂಗಳಾದರೂ ಥಿಯೇಟರ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: 'ಗದರ್-2' ಪಾರ್ಟಿಯಲ್ಲಿ ಅಪ್ಪಿಕೊಂಡ 'ಮಾಜಿ ಲವ್ಬರ್ಡ್ಸ್': ಕಾರ್ತಿಕ್-ಸಾರಾ ವಿಡಿಯೋ ವೈರಲ್