ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಅಭಿನಯದ 'ಬೈರಾಗಿ' ಸಿನಿಮಾ ಇಂದು 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ ಫ್ಯಾಮಿಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಶಿವರಾಜ್ ಕುಮಾರ್ ಯಾವುದೇ ಸ್ಟಾರ್ ಡಮ್ ಇಲ್ಲದೇ ಒಬ್ಬ ಮುಗ್ಧನಾಗಿ ಬೆಳ್ಳಿ ತೆರೆ ಮೇಲೆ ಮಿಂಚು ಹರಿಸಿದ್ದಾರೆ. ಹುಲಿ ಕುಣಿತ ಮಾಡಿ ಜೀವನ ಸಾಗಿಸುವ ಸರಳ ವ್ಯಕ್ತಿ ಶಿವಪ್ಪನ ಪಾತ್ರ ಅವರದ್ದು.
ಟಗರು ಬಳಿಕ ಶಿವಣ್ಣ ಹಾಗು ಧನಂಜಯ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅಧಿಕಾರದ ಅಮಲಿಗೆ ಬಿದ್ದು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಊರಿನ ಯಜಮಾನನಾಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಶಿವಣ್ಣನ ತಮ್ಮನಾಗಿದ್ದಾರೆ.
ಚಿತ್ರದಲ್ಲಿ ಬರುವ ತಮಿಳು ನಟಿ ಅಂಜಲಿ, ಶಶಿಕುಮಾರ್, ಶರತ್ ಲೋಹಿತಾಶ್ವ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 123ನೇ ಚಿತ್ರ ಬೈರಾಗಿ ಮೇಲೆ ಅವರ ಅಭಿಮಾನಿಗಳು ಇಟ್ಟುಕೊಂಡ ನಿರೀಕ್ಷೆಯಂತೂ ಸುಳ್ಳಾಗಿಲ್ಲ.
ಇದನ್ನೂ ಓದಿ: ನಿತ್ಯಾನಂದನ ಕುರಿತ ಡಾಕ್ಯುಮೆಂಟರಿ: ನಿರ್ಮಾಪಕ ನಮನ್ ಸಾರಯ್ಯ ಹೇಳಿದ್ದೇನು?
ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಇಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಹಾಗು ನಟ ಪೃಥ್ವಿ ಅಂಬರ್ ಚಿತ್ರಮಂದಿರಕ್ಕೆ ಬಂದು ಅಭಿಮಾನಿಗಳ ಜೊತೆ ಸಿನಿಮಾ ನೋಡಿದರು. ಪೃಥ್ವಿ ಅಂಬರ್ ಹುಲಿ ಕುಣಿತ ಮಾಡಿ ರಂಜಿಸಿದರು.