ಹಿಂದಿ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ 90 ರ ದಶಕದ ಅತ್ಯಂತ ಪಾಪುಲರ್ ಆನ್ಸ್ಕ್ರೀನ್ ಜೋಡಿ. ಅದ್ಭುತ ನಟನೆ ಮೂಲಕ ಮೋಡಿ ಮಾಡಿದ್ದರು. ಈ ಕಾಂಬಿನೇಶನ್ ಹೇಗಿತ್ತು ಅಂದ್ರೆ ಆಫ್ ಸ್ಕ್ರೀನ್ನಲ್ಲೂ ಜೋಡಿಯಾದ್ರೆ ಚೆನ್ನಾಗಿರುತ್ತಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಅಂತಿಮವಾಗಿ ಪರಸ್ಪರರು ತಮ್ಮ ಜೀವನದಲ್ಲಿ ವಿಭಿನ್ನ ಅಧ್ಯಾಯ ಪ್ರಾರಂಭಿಸಿದರು.
ವೆಲ್ಕಮ್ ಪಾರ್ಟ್ 3: ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಬೇಕೆಂಬುದು ಅಭಿಮಾನಿಗಳ ಆಸೆ. ಅಂತಿಮವಾಗಿ ಕನಸು ನನಸಾಗುವ ಕ್ಷಣ ಹತ್ತಿರದಲ್ಲಿದೆ. ಹೌದು, 20 ವರ್ಷಗಳ ಬ್ರೇಕ್ ಬಳಿಕ ವೆಲ್ಕಮ್ ಪಾರ್ಟ್ 3 ರಲ್ಲಿ ಈ ಜೋಡಿ ಮತ್ತೆ ಒಂದಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.
20 ವರ್ಷಗಳ ಬ್ರೇಕ್ ಬಳಿಕ ಮತ್ತೆ ಸಿನಿಮಾ: ನಟ ಅಕ್ಷಯ್ ಕುಮಾರ್ ಮತ್ತು ನಟಿ ರವೀನಾ ಟಂಡನ್ ಅವರು ಜೊತೆಯಾಗಿ ಮೊಹ್ರಾ, ಕಿಲಾಡಿಯೋನ್ ಕಾ ಕಿಲಾಡಿ, ಬರೂದ್, ಕೀಮತ್ ಸೇರಿದಂತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. 'ಪೊಲೀಸ್ ಫೋರ್ಸ್: ಆ್ಯನ್ ಇನ್ಸೈಡ್ ಸ್ಟೋರಿ' ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2004 ರಲ್ಲಿ ತೆರೆಕಂಡು ಯಶಸ್ವಿ ಆಗಿತ್ತು. 20 ವರ್ಷಗಳ ಬ್ರೇಕ್ ಬಳಿಕ ಈ ಜೋಡಿ ವೆಲ್ಕಮ್ 3 ನಲ್ಲಿ ಮತ್ತೆ ಕೆಲಸ ಮಾಡಲಿದೆ. ಸಿನಿಮಾ, ಪಾತ್ರಗಳ ಬಗ್ಗೆ ಮಾಹಿತಿಯನ್ನು ಗುಟ್ಟಾಗೇ ಇಡಲಾಗಿದ್ದು, ಹಿಂದೆಂದೂ ನೋಡಿರದಂತೆ ಭಿನ್ನವಾಗಿ ಮೂಡಿಬರಲಿದೆ ಎಂದು ಹೇಳಲಾಗಿದೆ.
ಮುಂದಿನ ಕ್ರಿಸ್ಮಸ್ಗೆ ಸಿನಿಮಾ ಬಿಡುಗಡೆ: 'ವೆಲ್ಕಮ್ ಟು ಜಂಗಲ್', ಇದೊಂದು ಅಡ್ವೆಂಚರ್ ಕಾಮಿಡಿ ಸಿನಿಮಾವಾಗಿದೆ. ಮುಂಬರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಾಗಿ ತಯಾರಿ ನಡೆಯುತ್ತಿದೆ. ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ಗೆ ದಿನ ನಿಗದಿ ಪಡಿಸಲಿದೆ. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಪಾತ್ರಗಳು, ಅಭಿನಯದ ಬಗ್ಗೆ ಸಿನಿಪ್ರಿಯರ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವರ್ಷ ಕ್ರಿಸ್ಮಸ್ ಸಂದರ್ಭ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: Haddi trailer: ತೃತೀಯಲಿಂಗಿ ಪಾತ್ರದಲ್ಲಿ ಅದ್ಭುತ ಎಂಟ್ರಿ ಕೊಟ್ಟ ನವಾಜುದ್ದೀನ್ ಸಿದ್ದಿಕಿ-ಸಿನಿಮಾ ಬಗ್ಗೆ ಗರಿಗೆದರಿದ ಕುತೂಹಲ
ಇನ್ನು, ಇತ್ತೀಚಿನ ದಿನಗಳಲ್ಲಿ ಸಿನಿಮಾ ಯಶಸ್ಸಿನ ವಿಚಾರವಾಗಿ ಸತತ ಹಿನ್ನಡೆ ಕಂಡಿದ್ದ ಅಕ್ಷಯ್ ಕುಮಾರ್ ಸದ್ಯ ಗೆಲುವಿನ ನಗೆ ಬೀರಿದ್ದಾರೆ. ಬಾಲಿವುಡ್ ಕಿಲಾಡಿಗೆ ಈ ಗೆಲುವಿನ ಅವಶ್ಯಕತೆ ಇತ್ತು. ಓಎಂಜಿ ಸಿನಿಮಾದ ಸೀಕ್ವೆಲ್ ಓ ಮೈ ಗಾಡ್ 2 ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಆಗಸ್ಟ್ 11 ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆಕಂಡಿದೆ.
ಇದನ್ನೂ ಓದಿ: 'ಕನಸೊಂದು ಸಿನಿಮಾ ಆಗಿ ತೆರೆಮೇಲೆ ಮೂಡಿದ ಆ ದಿನಕ್ಕೆ 5 ವರ್ಷ': ರಿಷಬ್ ಶೆಟ್ಟಿ ಸ್ಪೆಷಲ್ ಪೋಸ್ಟ್