ತೆಲುಗು ಚಿತ್ರರಂಗದ ಪ್ರಖ್ಯಾತ ನಟ 'ರೆಬಲ್ ಸ್ಟಾರ್' ಕೃಷ್ಣಂರಾಜು(83) ನಿಧನರಾಗಿದ್ದಾರೆ. ಹೈದರಾಬಾದ್‌ನ ಐಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮುಂಜಾನೆ 3.25ರ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಮವಾರ ಹೈದರಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
'ಬಾಹುಬಲಿ' ನಟ ಪ್ರಭಾಸ್ ಚಿಕ್ಕಪ್ಪ ಕೃಷ್ಣಂರಾಜು ಅವರು ಮಧುಮೇಹದಿಂದ ಬಳಲುತ್ತಿದ್ದರು. ಇದೀಗ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರಿಗೆ ದೀರ್ಘಕಾಲದ ಹೃದಯ ಬಡಿತದ ಸಮಸ್ಯೆಯೂ ಇತ್ತು. ಕಳೆದ ವರ್ಷ ಅವರು ಕಳಪೆ ರಕ್ತ ಪರಿಚಲನೆಯಿಂದಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ, ದೀರ್ಘಕಾಲದ ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಗಳಿದ್ದವು. ಕೋವಿಡ್ ನಂತರದ ಸಮಸ್ಯೆಗಳಿಂದ ಅವರನ್ನು ಕಳೆದ ತಿಂಗಳು 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ ಜನವರಿ 20, 1940ರಂದು ಜನಿಸಿದ ಕೃಷ್ಣಂರಾಜು ತೆಲುಗು ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದು ಗುರುತಿಸಿಕೊಂಡವರು. ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟು ಖಳನಟನಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ಕೆಲ ವರ್ಷಗಳ ಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಕೃಷ್ಣರಾಜು ಅವರು ವಾಜಪೇಯಿ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಪಯಣಿಸಿದ ಅವರ ನಿಧನದಿಂದ ತೆಲುಗು ಚಿತ್ರರಂಗದಲ್ಲಿ ದುಃಖ ಆವರಿಸಿದೆ.
ಎನ್ಟಿಆರ್ ಮತ್ತು ಅಕ್ಕಿನೇನಿ ನಂತರ ತೆಲುಗು ಚಿತ್ರರಂಗದಲ್ಲಿ ಎರಡನೇ ತಲೆಮಾರಿನ ನಾಯಕರಲ್ಲಿ ಕೃಷ್ಣಂರಾಜು ಒಬ್ಬರು. ಶೋಭನಬಾಬು ಮತ್ತು ಕೃಷ್ಣ ಬೆಳ್ಳಿತೆರೆಗೆ ಪರಿಚಯವಾದರೂ, 1966ರಲ್ಲಿ ತೆರೆಕಂಡ ‘ಚಿಲಕ ಗೋರಿಂಕ’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾದವರು ಕೃಷ್ಣಂರಾಜು. ಆದರೆ ಮೊದಲ ಚಿತ್ರವೇ ಅವರಿಗೆ ನಿರಾಸೆ ಮೂಡಿಸಿತ್ತು.
ನಟನೆಯಲ್ಲಿ ಮಿಂಚಲು ಪ್ರಸಿದ್ಧ ವ್ಯಕ್ತಿಗಳ ಪುಸ್ತಕಗಳನ್ನು ಓದುತ್ತಿದ್ದರು. ಹಿರಿಯ ನಟ ಸಿ.ಎಚ್.ನಾರಾಯಣ ರಾವ್ ಅವರ ಬಳಿ ತರಬೇತಿ ಪಡೆದರು. ನಂತರ ದೊಂಡಿ ನಿರ್ದೇಶನದಲ್ಲಿ ಅವೆಕಲ್ಲು ಚಿತ್ರದಲ್ಲಿ ವಿಲನ್ ಆಗಿ ರಂಜಿಸಿದರು. ಚಿತ್ರದಲ್ಲಿ ಖಳನಾಯಕನ ಅಭಿನಯಕ್ಕಾಗಿ ಅವರು ವಿಮರ್ಶಕರಿಂದ ಪ್ರಶಂಸೆ ಪಡೆದಿದ್ದರು.
ಅನೇಕ ಪ್ರಶಸ್ತಿಗಳು: ಕೃಷ್ಣಂರಾಜು ತಮ್ಮ ವಿಶಿಷ್ಟ ನಟನೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಂಧ್ರಪ್ರದೇಶ ಸರ್ಕಾರವು 1977ರಲ್ಲಿ ಅಮರದೀಪಮ್ ಚಿತ್ರಕ್ಕಾಗಿ ಮತ್ತು 1984ರಲ್ಲಿ ಬಬ್ಬಿಲಿ ಬ್ರಾಹ್ಮಣ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ನಂದಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. 1986ರಲ್ಲಿ, ಕೃಷ್ಣಂರಾಜು ಅವರು ತಂದೆಪಾರಾಯುಡು ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದರು, 2006ರಲ್ಲಿ ಅವರು ಫಿಲ್ಮ್ ಫೇರ್ ದಕ್ಷಿಣ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿತ್ತು.
ವೆಂಕಯ್ಯ ನಾಯ್ಡು ಸಂತಾಪ: ಕೃಷ್ಣಂ ರಾಜು ನಿಧನಕ್ಕೆ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದ್ದಾರೆ. "ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಚಿತ್ರನಟ ಶ್ರೀ ಉಪ್ಪಲಪಾಟಿ ವೆಂಕಟ ಕೃಷ್ಣಂರಾಜು ಅವರ ನಿಧನ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಒಳ್ಳೆಯ ಆಪ್ತನನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನೋವು ತಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಮಾತು ಬರುತ್ತಿಲ್ಲ: ಹಿರಿಯ ನಟ ಮೋಹನ್ ಬಾಬು ಅವರು ಖ್ಯಾತ ನಟ ಕೃಷ್ಣಂರಾಜು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಹೋದರ ಕೃಷ್ಣರಾಜು ಅವರ ನಿಧನದ ಸುದ್ದಿ ತಿಳಿದು ಮಾತು ಬರುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡ ಸಿನಿಮಾ ಇಂಡಸ್ಟ್ರಿ ಚಿಕ್ಕದಲ್ಲ, ಕೆಜಿಎಫ್ ಎಲ್ಲೆಡೆ ಸದ್ದು ಮಾಡಿದೆ: ನಟ ಅರ್ಜುನ್ ಸರ್ಜಾ