ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಅವರು ಸಿನಿಮಾವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ. ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ಟಿ ಜೆ ಜ್ಞಾನವೆಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಫೈನಲ್ ಆಗಬೇಕಿದೆ. ತಾತ್ಕಾಲಿಕವಾಗಿ ಇದನ್ನು ತಲೈವರ್ 170 ಎಂದು ಹೆಸರಿಸಲಾಗಿದೆ. ಹೆಸರಿಡದ ಚಿತ್ರದ ಮುಂಬೈ ಶೂಟಿಂಗ್ ಶೆಡ್ಯೂಲ್ ಅನ್ನು ಇಬ್ಬರು ಸೂಪರ್ ಸ್ಟಾರ್ಸ್ ಪೂರ್ಣಗೊಳಿಸಿದ್ದಾರೆ.
ಟಿ ಜೆ ಜ್ಞಾನವೆಲ್ ನಿರ್ದೇಶನದ ಈ ಸಿನಿಮಾ ಅದ್ಭುತ ಮನರಂಜನೆ ಜೊತೆಗೆ ಅರ್ಥಪೂರ್ಣ ಸಂದೇಶವನ್ನೂ ಒಳಗೊಂಡಿರಲಿದೆ ಎಂದು ನಂಬಲಾಗಿದೆ. 1991ರಲ್ಲಿ ಮೂಡಿ ಬಂದ 'ಹಮ್'ನಲ್ಲಿ ಕೊನೆ ಬಾರಿಗೆ ತೆರೆ ಹಂಚಿಕೊಂಡಿದ್ದ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಇಬ್ಬರು ದಿಗ್ಗಜರು ಅಕ್ಟೋಬರ್ 25 ರಂದು ತಮ್ಮ ಮುಂಬರುವ ಈ ಪ್ರಾಜೆಕ್ಟ್‌ನ ಕೆಲಸ ಪ್ರಾರಂಭಿಸಿದರು. ಇದೀಗ ಚಿತ್ರದ ಕುರಿತು ಅಪ್‌ಡೇಟ್ ಹಂಚಿಕೊಂಡಿರುವ ನಿರ್ಮಾಪಕರು, ಭಾರತೀಯ ಚಿತ್ರರಂಗದ ಇಬ್ಬರು ದೊಡ್ಡ ತಾರೆಯರನ್ನು ಮತ್ತೆ ಒಂದುಗೂಡಿಸುತ್ತಿರುವ ಈ ಸಿನಿಮಾವು 'ಡಬಲ್ ಡೋಸ್ ಆಫ್ ಲೆಜೆಂಡ್ಸ್' ಆಗಲಿದೆ ಎಂದು ತಿಳಿಸಿದ್ದಾರೆ.
ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಅವರ ಮುಂಬೈ ಶೂಟಿಂಗ್ ಸೆಟ್‌ನ ಕ್ಷಣವನ್ನು ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ಫೋಟೋದಲ್ಲಿ, ನಟ ಅಮಿತಾಭ್ ಬಚ್ಚನ್ ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿದ್ದು, ಕುರ್ಚಿಯಲ್ಲಿ ಕುಳಿತಿದ್ದಾರೆ. ನಟ ರಜನಿಕಾಂತ್ ಅವರು ಅಮಿತಾಭ್ ಬಚ್ಚನ್ ಜೊತೆ ಫ್ರೆಂಡ್ಲಿಯಾಗಿ ನಿಂತು ಮಾತನಾಡುತ್ತಿದ್ದಾರೆ. ಇಬ್ಬರೂ ಫೋನ್ ನೋಡುತ್ತಿದ್ದು, ಅಭಿಮಾನಿಗಳಲ್ಲಿ ಈ ಫೋಟೋ ಕುತೂಹಲ ಮೂಡಿಸಿದೆ.
ಕುತೂಹಲ ಮೂಡಿಸುವ ಫೋಟೋ ಹಂಚಿಕೊಂಡಿರುವ ಲೈಕಾ ಪ್ರೊಡಕ್ಷನ್ಸ್, "ಸೂಪರ್ ಸ್ಟಾರ್ ಹಾಗೂ ಶೇನ್‌ಶಾ 33 ವರ್ಷಗಳ ಬ್ರೇಕ್ ನಂತರ ತಲೈವರ್ 170 ಸೆಟ್ನಲ್ಲಿ ಭೇಟಿಯಾದರು. ತಲೈವರ್ 170 ಲೆಜೆಂಡ್ಸ್ಗಳ ಡಬಲ್ ಡೋಸ್ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟ್ರೋಲ್ಸ್ಗೆ ಡೋಂಟ್ ಕೇರ್: ಟ್ರೋಲರ್ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ!
ಇದಕ್ಕೂ ಮುನ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ರಜನಿಕಾಂತ್ ಅವರೊಂದಿಗಿನ ಮೊದಲ ದಿನದ ಚಿತ್ರೀಕರಣದ ಫೋಟೋವನ್ನು ಪೋಸ್ಟ್ ಮಾಡಿದ್ದರು. ಜೊತೆಗೆ ಈ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದರು. ''33 ವರ್ಷಗಳ ನಂತರ ದಿ ತಲೈವರ್, ರಜಿನಿಕಾಂತ್ ಸರ್ ಅವರೊಂದಿಗೆ ಶೂಟಿಂಗ್ನಲ್ಲಿ ಭಾಗಿಯಾಗುತ್ತಿರುವ ಮೊದಲ ದಿನ" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಕಪ್ಪು ಸೀರೆಯಲ್ಲಿ ಹಾಲ್ಗೆನ್ನೆ ಸುಂದರಿ, ಬೆಳದಿಂಗಳಂಥ ರೂಪರಾಶಿ! ತಮನ್ನಾ ಭಾಟಿಯಾ ಫೋಟೋಗಳನ್ನು ನೋಡಿ..
ಇದು ನಟ ರಜನಿಕಾಂತ್ ಅವರ 170ನೇ ಸಿನಿಮಾ. ಹಾಗಾಗಿ ಸದ್ಯ ಈ ಪ್ರೊಜೆಕ್ಟ್ ಅನ್ನು ತಾತ್ಕಾಲಿಕವಾಗಿ ''ತಲೈವರ್ 170'' ಎಂದು ಹೆಸರಿಸಲಾಗಿದೆ. ಈ ಸಿನಿಮಾ ಬಿಗ್ ಸ್ಟಾರ್ ಕಾಸ್ಟ್ ಮೂಲಕ ಗಮನ ಸೆಳೆಯುತ್ತಿದೆ. ರಜನಿ, ಬಿಗ್ ಬಿ ಅಲ್ಲದೇ, ದಕ್ಷಿಣದ ಬಹುಬೇಡಿಕೆ ತಾರೆಯರಾದ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಕೂಡ ಇದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.