ಬೆಂಗಳೂರು: ಲಿಡ್ಕರ್ ಉತ್ಪನ್ನಗಳ ರಾಯಭಾರಿಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ನೇಮಕ ಮಾಡಲಾಗಿದ್ದು, ಅವರು ಉಚಿತವಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 67ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭ ಲಿಡ್ಕರ್ ಉತ್ಪನ್ನಗಳಿಗೆ ನಟ ಡಾಲಿ ಧನಂಜಯ್ ರಾಯಭಾರಿ ಎಂಬುದನ್ನು ಸಿಎಂ ಘೋಷಿಸಿದರು.
ಅವರೋರ್ವ ಜನಪ್ರಿಯ ನಟ ಹಾಗೂ ಸಾಮಾಜಿಕ ಕಳಕಳಿ ಉಳ್ಳವರು. ಅವರನ್ನು ಲಿಡ್ಕರ್ ಉತ್ಪನ್ನಗಳ ರಾಯಭಾರಿಯಾಗಿ ನೇಮಕ ಮಾಡಿರುವುದು ಅರ್ಥಪೂರ್ಣವಾಗಿದೆ. ಈ ಮೂಲಕ ಲಿಡ್ಕರ್ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುವುದಲ್ಲದೇ ಚರ್ಮ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಸಿಎಂ ತಿಳಿಸಿದರು.
ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್) ಇದೇ ಮೊದಲ ಬಾರಿಗೆ ರಾಯಭಾರಿಯನ್ನು ಆಯ್ಕೆ ಮಾಡಲಾಗಿದೆ. ಲಿಡ್ಕರ್ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದ್ದು, ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್ವುಡ್ನ ಜನಪ್ರಿಯ ನಟ ಧನಂಜಯ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ.
ಇದನ್ನೂ ಓದಿ: 'ಲಿಡ್ಕರ್' ಉತ್ಪನ್ನಗಳಿಗೆ ಡಾಲಿ ಧನಂಜಯ್ ರಾಯಭಾರಿ
ಡಾಲಿ ಧನಂಜಯ್ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಸ್ಯಾಂಡಲ್ವುಡ್ನಲ್ಲಿ ಸರಣಿ ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿರುವ ನಟ. ತಮ್ಮ ನಟನಾ ಕೌಶಲ್ಯದ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಅನೇಕ ಪ್ರೇಕ್ಷಕರ ಮನೆಗೆದ್ದಿರುವ ಈ ನಟನನ್ನು ನಟರಾಕ್ಷಸ ಎಂದೇ ಗುರುತಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲೆಂದೇ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ಸಾಮಾಜಿಕ ಕಳಕಳಿ ಹೊಂದಿರುವ ನಟ ಕೂಡ ಹೌದು. ಈ ನಿಟ್ಟಿನಲ್ಲಿ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಲಿಡ್ಕರ್ ಉತ್ಪನ್ನಗಳ ಅಭಿವೃದ್ಧಿ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಸರ್ಕಾರದ ಜಾಹೀರಾತು ಅನ್ನೋದು ಮತ್ತೊಂದು ವಿಶೇಷತೆ.
ಇದನ್ನೂ ಓದಿ: 'ದಿ ಆರ್ಚೀಸ್' ಈವೆಂಟ್ನಲ್ಲಿ ಬಚ್ಚನ್, ಖಾನ್ ಫ್ಯಾಮಿಲಿ; ಬಾಲಿವುಡ್ ಖ್ಯಾತನಾಮರ ಸಮಾಗಮ
ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ ಅವರು ಕೆಲ ದಿನಗಳ ಹಿಂದೆ ಈ ಬಗ್ಗೆ ಮಾತನಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟ. ಎಲ್ಲಾ ವರ್ಗದ ಜನರನ್ನು ತಲುಪುವ ನಟನಾದ ಹಿನ್ನೆಲೆ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದು ನಮಗೆ ಬಹಳಾನೆ ಖುಷಿ ಕೊಟ್ಟಿದೆ. ಶೀಘ್ರದಲ್ಲೇ ಜಾಹೀರಾತಿನ ಚಿತ್ರೀಕರಣ ಕೂಡ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು.