ಶಿವಮೊಗ್ಗ: ಕನ್ನಡಕ್ಕೆ ಕಾನೂನಿನ ಬಲ ಬೇಕು. ಆಗ ಮಾತ್ರ ಭಾಷೆಯ ಅಭಿವೃದ್ಧಿ ಸಾಧ್ಯ. ಆದ್ದರಿಂದ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022' ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಾದರೂ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಸಿಕ್ಕಿಲ್ಲ. ಸರ್ಕಾರಗಳು, ಅಧಿಕಾರಿಗಳು ಮತ್ತು ಶಿಕ್ಷಣ ವ್ಯವಸ್ಥೆ ಈ ಎಲ್ಲದರ ನಡುವೆ ಕನ್ನಡ ಭಾಷೆ ಸಿಲುಕಿಕೊಂಡಿದೆ. ಅನ್ನ ಕೊಡುವ ಭಾಷೆ ಕನ್ನಡವಾಗಬೇಕು ಎಂಬ ಹಿನ್ನೆಲೆಯಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಕಾರ್ಯಕ್ರಮ ಆಯೋಜಿಸಿದೆ ಎಂದರು.
ಕನ್ನಡದ ಮೂಲಕವೇ ಇಂದು ಜಗತ್ತನ್ನು ಪ್ರವೇಶಿಸಬೇಕಾಗಿದೆ. ಆಡಳಿತ ಭಾಷೆಯಾಗಿ ಕನ್ನಡ ಇನ್ನೂ ಸರಿಯಾದ ದಿಕ್ಕಿನತ್ತ ಹೋಗದಿರುವುದು ವಿಷಾದನೀಯ ಸಂಗತಿ. ಶಿಕ್ಷಣ, ಆಡಳಿತ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಕನ್ನಡವೇ ಪ್ರಧಾನವಾಗಬೇಕಾಗಿದೆ. ಔದ್ಯೋಗಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಕಡೆ ಕನ್ನಡದ ಬಳಕೆಯಾಗಬೇಕಾಗಿದೆ. ಕನ್ನಡಿಗರು ಕನ್ನಡ ಮಾತನಾಡುವುದನ್ನು ಗರ್ವ ಎಂದು ಭಾವಿಸಬೇಕಾಗಿದೆ ಎಂದರು.
ಕನ್ನಡದ ಹಲವು ಸಮಸ್ಯೆಗಳ ನಿವಾರಣೆಗಾಗಿ ಭಾಷೆಯ ಹೊಸ ಆವಿಷ್ಕಾರಕ್ಕಾಗಿ, ಉದ್ಯೋಗಕ್ಕಾಗಿ ಶಿಕ್ಷಣದಲ್ಲಿ ಕನ್ನಡ ಪ್ರಾಧಾನ್ಯತೆ ಪಡೆಯುವುದಕ್ಕಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಮುಂದಿನ ಅಧಿವೇಶನದಲ್ಲಿಯೇ ಇದು ಮಂಡನೆಯಾಗಲಿದ್ದು, ಜಾರಿಗೆ ಬರುವ ಎಲ್ಲ ಸಾಧ್ಯತೆ ಇದೆ ಎಂದರು.
ಕಾನೂನಿನ ಜೊತೆಗೆ ಜನಾಭಿಪ್ರಾಯವೂ ಮುಖ್ಯವಾಗುತ್ತದೆ. ಜನ ಭಾಷೆಯ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕನ್ನಡ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಕಲಿಕಾ ಅಧಿನಿಯಮ ಜಾರಿಗೆ ಬಂದಿದ್ದರೂ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ನಿಯಮಗಳು, ಆದೇಶಗಳು ಆದರೆ ಸಾಲದು, ಅದು ಕಾನೂನು ಆದಾಗ ಮಾತ್ರ ಬೆಲೆ ಬರುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಹಲವು ಕಾರ್ಯಕ್ರಮ ನಡೆಸುತ್ತಾ ಬಂದಿದೆ ಎಂದರು.
ಇದನ್ನೂ ಓದಿ: ಅನುವಂಶೀಯ ಕಾರಣದಿಂದ ಪುನೀತ್ ರಾಜ್ಕುಮಾರ್ಗೆ ಹೃದಯಾಘಾತ: ಡಾ.ಸಿ.ಎನ್ ಮಂಜುನಾಥ್
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಡಳಿತ ಭಾಷೆಯಾಗಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಗಣಕೀಕರಣ ತಂತ್ರಾಂಶ ಬಳಸಿಕೊಂಡಿದೆ. ಪದಗಳ ಅರ್ಥಗಳಿಗಾಗಿಯೇ ಪ್ರಾಧಿಕಾರ ಪದಕಣಜ ಎಂಬ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಆಯಾ ವಿಷಯಕ್ಕೆ ಸೇರಿದಂತೆ ಪ್ರತ್ಯೇಕವಾಗಿ ಕನ್ನಡ ಭಾಷೆಯ ಪದಗಳನ್ನು ರಚಿಸಲಾಗಿದೆ. ಇದು ಅತ್ಯಂತ ಉಪಯುಕ್ತವಾಗಿದೆ. ಇದರ ಜೊತೆಗೆ ವೃತ್ತಿ ಶಿಕ್ಷಣದಲ್ಲಿ ಮತ್ತು ಕೇಂದ್ರೀಯ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂಬುದನ್ನು ಕೂಡ ಪ್ರಾಧಿಕಾರ ಒತ್ತಾಯಿಸಿದೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್, ರಾಜ್ಯ ಸಂಘದ ನಿರ್ದೇಶಕ ಎನ್. ರವಿಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಲಕ್ಕಿಮ್ಯಾನ್' ಬಿಡುಗಡೆ: ದೇವರ ರೂಪದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟ ಅಪ್ಪು