ಕನ್ನಡ ಚಿತ್ರರಂಗದ ಭಜರಂಗಿ, ವಜ್ರಕಾಯ, ವೇದ ಸೂಪರ್ ಹಿಟ್ ಸಿನಿಮಾ ಖ್ಯಾತಿಯ ಎ ಹರ್ಷ ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ ಸ್ಟಾರ್ ನಟ ಗೋಪಿಚಂದ್ ಅವರ 31 ನೇ ಚಿತ್ರಕ್ಕೆ ಸ್ಯಾಂಡಲ್ವುಡ್ ಸ್ಟಾರ್ ನಿರ್ದೇಶಕ ಎ ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಶನ್ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದ್ದು, ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ಅಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಎ ಹರ್ಷ ಹೆಣೆದ ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಗೋಪಿಚಂದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 14 ನೇ ಸಿನಿಮಾ ಇದಾಗಿದ್ದು, ಕೆ. ರಾಧಾಮೋಹನ್ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಬಗ್ಗೆ ನಿರ್ಮಾಪಕ ಕೆ ಕೆ ರಾಧಾಮೋಹನ್ ಮಾತನಾಡಿ, ಗೋಪಿಚಂದ್ ಹಾಗೂ ಎ ಹರ್ಷ ಜೊತೆ ಸೇರಿ ಸಿನಿಮಾ ಮಾಡುತ್ತಿರುವುದು ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ಇದು ನಮ್ಮ ನಿರ್ಮಾಣ ಸಂಸ್ಥೆಯ 14 ನೇ ಸಿನಿಮಾವಾಗಿದೆ. ನಿರ್ದೇಶಕರು ಪವರ್ ಫುಲ್ ಸಬ್ಜೆಕ್ಟ್ ಇರುವ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್ ವಿಭಿನ್ನ ಪಾತ್ರದಲ್ಲಿ ತೆರೆ ಮೇಲೆ ಕಾಣಲಿದ್ದಾರೆ. ಇದೇ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಕರ್ ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ: ಹೆಮ್ಮೆ ವ್ಯಕ್ತಪಡಿಸಿದ ಪತಿ ರಣ್ವೀರ್
ಈ ಚಿತ್ರಕ್ಕೆ ಸ್ವಾಮಿ ಜೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನವಿದ್ದು, ಸದ್ಯದಲ್ಲೇ ಸಿನಿಮಾದ ತಾರಾಬಳಗ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.
ಯಶಸ್ವಿ ಸಿನಿಮಾ 'ವೇದ': ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿದೆ. ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂಬ ಸಂದೇಶವನ್ನಿಟ್ಟುಕೊಂಡು ರಿಲೀಸ್ ಆದ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಶಿವರಾಜ್ಕುಮಾರ್ ಅವರ ಸ್ಟಾಲ್ ಅಂಡ್ ಪೇಪರ್ ಲುಕ್ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ವೇದ ಸಿನಿಮಾವು ಶಿವರಾಜ್ ಕುಮಾರ್ ಮತ್ತು ಹರ್ಷ ಜೋಡಿಯ 4 ನೇ ಚಿತ್ರವಾಗಿದ್ದು, ಶಿವಣ್ಣನ 125 ನೇ ಸಿನಿಮಾವಾಗಿದೆ.
ವೇದ ಸಿನಿಮಾ 1960ರ ದಶಕದ ಕಥೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್, ಅನುಪಮಾ ಸೇರಿದಂತೆ ಅನೇಕ ಹಿಟ್ ಕಲಾವಿದರು ಅಭಿನಯಿಸಿದ್ದಾರೆ. ಜೊತೆಗೆ ಉಮಾಶ್ರೀ, ಕುರಿ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಬಹುನಿರೀಕ್ಷಿತ ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆ ಮುಹೂರ್ತ ಫಿಕ್ಸ್