ಸಿಂಪಲ್ ಸುನಿ ಅವರೊಂದಿಗೆ ಕೆಲಸ ಮಾಡಿದ್ದ ಯುವ ನಿರ್ದೇಶಕ ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಕೆಲಸ ಮುಗಿದಿದ್ದು ಇದೀಗ ಚಿತ್ರತಂಡ ರೀ ರೆಕಾರ್ಡಿಂಗ್ನಲ್ಲಿ ನಿರತವಾಗಿದೆ. ಪ್ರಮೋದ್ ಜಯ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಹೊಸ ಪ್ರತಿಭೆ ರಂಜಿತ್ ಚೊಚ್ಚಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಪಂದನ ಸೋಮಣ್ಣ ನಾಯಕಿ ನಟಿಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಫೋಟೋ ಶೂಟ್ನಿಂದ ಸಿನಿಪ್ರಿಯರ ಗಮನ ಸೆಳೆದಿತ್ತು. ವಿಭಿನ್ನ ಕಥಾಹಂದರ ಹೊಂದಿರುವ 'ದಿಲ್ ಖುಷ್' ಯೂತ್ ಸ್ಟೋರಿ ಹೊಂದಿದೆ.
ನಿರ್ದೇಶಕ ಪ್ರಮೋದ್ ಜಯ ಮಾತನಾಡಿ, "ಇದು ಬರಿ ಯುವಜನತೆಯ 'ದಿಲ್ ಖುಷ್' ಅಲ್ಲ. ಮಕ್ಕಳಿಂದ ಹಿಡಿದು ಹಿರಿಯರು ಸೇರಿ ಎಲ್ಲಾ ವಯಸ್ಸಿನವರಿಗೂ ಹಿಡಿಸುವ ಸಿನಿಮಾ. ಕುಟುಂಬಸಮೇತ ನೋಡಬಹುದು. ಯುವಪ್ರತಿಭೆ ರಂಜಿತ್ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ನಟಿಸಿದ್ದಾರೆ. ನಾಯಕ, ನಾಯಕಿ ಪಾತ್ರ ಅಷ್ಟೇ ಅಲ್ಲದೆ ಎಲ್ಲ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ನಮ್ಮ ಸುತ್ತಮುತ್ತ ನಡೆಯುವ ಕಥೆ ಎಂದೆನಿಸುತ್ತದೆ. ಕಾಮಿಡಿ ಹಾಗು ಎಮೋಷನಲ್ ಸನ್ನಿವೇಶಗಳಿವೆ. ರಂಗಾಯಣ ರಘು, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು ಅವರ ಪಾತ್ರಗಳು ಚಿತ್ರ ನೋಡಿ ಮುಗಿಸಿ ಥಿಯೇಟರ್ನಿಂದ ಮನೆಗೆ ಹೋದ ನಂತರವೂ ಕಾಡುತ್ತವೆ" ಎಂದರು.
"ಬೆಂಗಳೂರು, ಕೊಡಗಿನ ಸೋಮವಾರಪೇಟೆ, ಶನಿವಾರಸಂತೆ ಮುಂತಾದೆಡೆ ಚಿತ್ರೀಕರಣ ನಡೆದಿದೆ. ಡಬ್ಬಿಂಗ್ ಕೂಡ ಪೂರ್ಣವಾಗಿದೆ. ರೀ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿವೆ. ಫೆಬ್ರವರಿ ನಂತರ ಒಂದಾದ ಮೇಲೊಂದರಂತೆ ಹಾಡು ಬಿಡುಗಡೆಯಾಗಲಿದೆ" ಎಂದು ನಿರ್ದೇಶಕರು ತಿಳಿಸಿದರು.
ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿವಾಸ್ ನಾರಾಯಣ್ ಛಾಯಾಗ್ರಹಣವಿರುವ ಚಿತ್ರಕ್ಕೆ ಜ್ಞಾನೇಶ್ ಬಿ.ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ವಿಕ್ರಮ್ ಹಾಗೂ ಅಶೋಕ್ ಅವರ ಸಾಹಸ ನಿರ್ದೇಶನವಿದೆ. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಡಿಯಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಪ್ರಥಮ ಪ್ರತಿ, ಟ್ರೈಲರ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಇದನ್ನೂ ಓದಿ: ಲಕ್ಕಿ ವಿನಾಯಕ ದೇವಸ್ಥಾನದಲ್ಲಿ ಸೆಟ್ಟೇರಿದ ಹೊಸಬರ 'ದಿಲ್ ಖುಷ್' ಸಿನಿಮಾ