'ಅದ್ಧೂರಿ' ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಕಾಂಬಿನೇಷನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ 'ಮಾರ್ಟಿನ್' ಚಿತ್ರವು ಸದ್ಯ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇತ್ತೀಚೆಗೆ ತೆರೆಕಂಡ ಚಿತ್ರಗಳಲ್ಲಿ 'ಮಾರ್ಟಿನ್' ಕೂಡ ಚಂದನವನದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಆಗಲಿದೆ ಅಂತ ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. 'ಪೊಗರು' ಯಶಸ್ಸಿನ ಬಳಿಕ ತೆರೆಗೆ ಬರುತ್ತಿರುವ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಲ್ಲಿಯೂ ಕುತೂಹಲ ಮೂಡಿಸಿದೆ. ಆದ್ರೆ ಮಾರ್ಟಿನ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಈ ಹಿಂದೆ ಈ ಚಿತ್ರವನ್ನು ದಸರಾ ಹಬ್ಬಕ್ಕೆ ಅಂದ್ರೆ, ಸೆ.30ಕ್ಕೆ ಬಿಡುಗಡೆ ಮಾಡುವುದೆಂದು ನಿರ್ಧಾರವಾಗಿತ್ತು. ಅದಕ್ಕೆ ಎಲ್ಲ ರೀತಿಯ ಸಿದ್ಧತೆಯೂ ನಡೆದಿತ್ತು. ಆದರೆ, ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಧ್ರುವ ಸರ್ಜಾ ಅವರ ಅಜ್ಜಿಯೂ ಆದ ಲಕ್ಷ್ಮಿದೇವಮ್ಮ ಅವರು ನಿಧನಕ್ಕೂ ಮುನ್ನ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆ ಸಮಯದಲ್ಲಿ ಆತಂಕದಲ್ಲಿದ್ದ ಧ್ರುವ ಸರ್ಜಾ ಬಾಕಿಯಿದ್ದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. 10-12 ದಿನಗಳ ಕಾಲ ಶೂಟ್ ಮಾಡಬೇಕಿದ್ದ ಆ ಭಾಗವನ್ನು ಸದ್ಯದಲ್ಲೇ ಚಿತ್ರೀಕರಿಸಲು ತಂಡ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸ್ವಲ್ಪ ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸದ್ಯದಲ್ಲೇ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ನಿರ್ದೇಶಕ ಎಪಿ ಅರ್ಜುನ್ ಅವರು ತಿಳಿಸಿದ್ದಾರೆ.
ಇನ್ನು ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗಿದೆ. ಉದಯ್ ಕೆ. ಮೆಹ್ತಾ ಅವರ ಬ್ಯಾನರ್ನಲ್ಲೇ ದೊಡ್ಡ ಬಜೆಟ್ ಚಿತ್ರವಾಗಿ 'ಮಾರ್ಟಿನ್' ಹೊರಬರುತ್ತಿದ್ದು, ಈ ಚಿತ್ರದಲ್ಲಿ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಧ್ರುವ ಸರ್ಜಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪೋಸ್ಟರ್‌ನಿಂದಲೇ ಗಮನ ಸೆಳೆದಿರುವ 'ಮಾರ್ಟಿನ್' ಚಿತ್ರದ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಚಿತ್ರ ಯಾವಾಗ ಬರುತ್ತೋ ಅಂತ ಕಾಯುತ್ತಿದ್ದವರಿಗೆ ಕೊಂಚ ನಿರಾಸೆಯಾದರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೊಸ ರಿಲೀಸ್ ಡೇಟ್‌ಗಾಗಿ ಎದುರು ನೋಡುತ್ತಿದ್ದಾರೆ.
ಇತ್ತೀಚೆಗೆ ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು, ಇದರ ಜೊತೆಗೆ ಮಾತಿನ ಭಾಗ ಸೇರಿ 16 ದಿನಗಳವರೆಗೆ ಕಾಶ್ಮೀರದಲ್ಲೇ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹೊಸ ಮಾದರಿಯ ಮೇಕಿಂಗ್ ಪ್ರಯತ್ನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ತಲೆಗೆ ಬ್ಯಾಟರಿ ಕಟ್ಟಿಕೊಂಡು ಜೋಳಕ್ಕೆ ನುಗ್ಗಿದ ಆನೆ ಓಡಿಸಿದರಂತೆ ಅಪ್ಪು: 'ಗಂಧದಗುಡಿ' ಅನುಭವ ಬಿಚ್ಚಿಟ್ಟ ಮಿಲ್ಟ್ರಿ ಮಾದೇವ