'ರಂಗಿತರಂಗ', 'ಅವನೇ ಶ್ರೀಮನ್ನಾರಾಯಣ' ಹಾಗೂ 'ಸ್ಪೂಕಿ ಕಾಲೇಜು' ಗಳಂತಹ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಬಾರಿ ಮತ್ತೆ ಹೊಸ ತಂಡ ಹಾಗೂ ಆಕರ್ಷಕ ಕಂಟೆಂಟ್ನೊಂದಿಗೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ವಿಭಿನ್ನ ಶೀರ್ಷಿಕೆಯ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ. ದೀಕ್ಷಿತ್ ಶೆಟ್ಟಿ ನಾಯಕನಾಗಿರುವ ಈ ಸಿನಿಮಾದ ಟೈಟಲ್ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ'.
ಹಾಸ್ಯ ಪ್ರಧಾನ ಚಿತ್ರದಲ್ಲಿ 'ದಿಯಾ' ನಟ: ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ'ಯಲ್ಲಿ ನಾಯಕ ನಟ. ಹಾಸ್ಯ ಪಾತ್ರದ ಹುಡುಕಾಟದಲ್ಲಿದ್ದ ಶೆಟ್ಟಿ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದಾರೆ. ಬಯಸಿದ ಸಿನಿಮಾ ಸಿಕ್ಕಿದ್ದು, ಅಭಿಮಾನಿಗಳಿಗೂ ಕುತೂಹಲವಿದೆ.
ಬಹುಭಾಷೆಗಳಲ್ಲಿ ದೀಕ್ಷಿತ್ ಶೆಟ್ಟಿ: 'ದಿಯಾ' ಹಾಗೂ 'ದಸರಾ' ಅಭಿನಯಕ್ಕೆ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಸಿನಿಮಾದಲ್ಲಿ ಅಭಿಷೇಕ್ ಎಂ. ಅವರಿಗೆ ನಿರ್ದೇಶನದ ಹೊಣೆ ನೀಡಿದ್ದಾರೆ.
ಅಭಿಷೇಕ್ ಎಂ.ನಿರ್ದೇಶನದ ಚೊಚ್ಚಲ ಚಿತ್ರ: ನಿರ್ದೇಶಕರು ಸಿಂಪಲ್ ಸುನಿ ಜೊತೆ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ', 'ಬಹುಪರಾಕ್' ಮತ್ತು 'ಆಪರೇಷನ್ ಅಲಮೇಲಮ್ಮ' ಸಿನಿಮಾಗಳಿಗೆಲ್ಲ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕೆಲ ಸಿನಿಮಾಗಳ ಸಂಕಲನ ಮಾಡಿದ ಅನುಭವವೂ ಇವರಿಗಿದೆ. 'ಪಿನಾಕ' ಎಂಬ ವಿಎಫ್ಎಕ್ಸ್ ಸ್ಟುಡಿಯೋ ಹೊಂದಿರುವ ಅಭಿಷೇಕ್ ಎಂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಮೂಲಕ ಇದೇ ಮೊದಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ: ಪಠಾಣ್, ಜವಾನ್, ಲಿಯೋ.. 2023ರ ಹಿಟ್ ಸಿನಿಮಾಗಳ ದಾಖಲೆ ಪುಡಿಗಟ್ಟಲಿದೆ 'ಸಲಾರ್'!
ಬ್ಯಾಂಕ್ ದರೋಡೆ ಕಥೆ: ಬ್ಯಾಂಕ್ ದರೋಡೆಗೆ ಹೊರಟವರ ಸುತ್ತ ಕಥೆ ಹೆಣೆಯಲಾಗಿದೆ. ದೊಡ್ಡ ನವ ತಾರಾಗಣ ಚಿತ್ರದಲ್ಲಿದೆ. ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ಅಶ್ವಿನ್ ರಾವ್, ಹಾಸ್ಟೆಲ್ ಹುಡುಗರು ಖ್ಯಾತಿಯ ಶ್ರೀವತ್ಸ, ಶ್ರೇಯಸ್ ಶರ್ಮಾ, ವಿನುತ ಸೇರಿದಂತೆ ಇನ್ನಿತರರು ಈ ಚಿತ್ರದ ಭಾಗವಾಗಿದ್ದಾರೆ.
ಇದನ್ನೂ ಓದಿ: ಆಸ್ಕರ್ ನಾಮಿನೇಶನ್ ಲಿಸ್ಟ್ನಿಂದ ಭಾರತೀಯ ಸಿನಿಮಾ ಔಟ್: ಕ್ಷಮೆಯಾಚಿಸಿದ ಜೂಡ್ ಆಂಥನಿ ಜೋಸೆಫ್
ಮೊದಲ ಹಂತದ ಚಿತ್ರೀಕರಣ ಪೂರ್ಣ: ಸದ್ಯ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಬೆಂಗಳೂರು ಹಾಗೂ ಚಿತ್ರದುರ್ಗದ ಸುತ್ತಮುತ್ತ ಶೂಟಿಂಗ್ ಮುಗಿಸಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಂಡ ಸಜ್ಜಾಗಿದೆ. ಮುಂದಿನ ಹಂತದ ಶೂಟಿಂಗ್ ಜನವರಿ ಮೊದಲ ವಾರ ಆರಂಭವಾಗಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ.