ನವಗ್ರಹ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿದ ನಟ ಧರ್ಮ ಕೀರ್ತಿರಾಜ್ 'ವಸುಂಧರದೇವಿ' ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲು ಬರುತ್ತಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ನಟ ಧರ್ಮ ಕೀರ್ತಿರಾಜ್ಗೆ ಸೋನು ಗೌಡ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾಲತಾಣದಲ್ಲಿ ಚಿತ್ರದ ಟೀಸರ್ ಸಖತ್ ಸದ್ದು ಮಾಡುತ್ತಿದ್ದು ಟೀಸರ್ ನೋಡಿದವರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ಸಂತೋಷವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು.
ಮೊದಲಿಗೆ ಮಾತು ಶುರು ಮಾಡಿದ ನಿರ್ದೇಶಕ ಮಹೇಶ್ ಚಿನ್ಮಯ್, ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಧರ್ಮ ಕೀರ್ತಿರಾಜ್ ಅವರೊಡನೆ ಇದು ಎರಡನೇ ಚಿತ್ರ. 'ವಸುಂಧರದೇವಿ' ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಮುಖ್ಯಮಂತ್ರಿಯ ಮಗಳೊಬ್ಬಳು ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಮುಖ್ಯಮಂತ್ರಿಯೂ ಆಗುತ್ತಾಳೆ. ನಂತರ ಆಕೆಯ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು? ಎಂದು ಕಂಡು ಹಿಡಿಯಲು ತನಿಖಾಧಿಕಾರಿ ಬರುತ್ತಾರೆ. ಆ ಪಾತ್ರದಲ್ಲಿ (ತನಿಖಾಧಿಕಾರಿ) ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. 'ವಸುಂಧರದೇವಿ' ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ. ಗೋವಿಂದೇ ಗೌಡ, ರೂಪೇಶ್, ಪೂಜಾ, ಸೆವೆನ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆಯಿದೆ ಎಂದರು.
- " class="align-text-top noRightClick twitterSection" data="">
ಇನ್ನು ಧರ್ಮ ಕೀರ್ತಿರಾಜ್ ಮಾತನಾಡಿ ನನ್ನ ಚಿತ್ರಕ್ಕೆ ಹಾರೈಸಲು ಅಪ್ಪ- ಅಮ್ಮ ಬಂದಿದ್ದಾರೆ. ಅವರಿಗೆ ಧನ್ಯವಾದ. ಈ ಹಿಂದೆ ನಟಿಸಿರುವ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ. ನನ್ನ ಹೇರ್ ಸ್ಟೈಲ್ ಕೂಡ ಈ ಚಿತ್ರಕ್ಕಾಗಿ ಬದಲಿಸಿಕೊಂಡಿದ್ದೀನಿ. ಮಹೇಶ್ ಒಂದೊಳ್ಳೆಯ ಚಿತ್ರ ನಿರ್ದೇಶನ ಮಾಡಿದ್ದಾರೆ. ಅಶೋಕ್ ನಿರ್ಮಾಣ ಮಾಡಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ ಎಂದರು.
ನಾನು ಶಾಲಾ ದಿನಗಳಲ್ಲಿ ಮೈಕ್ ಮುಂದೆ ಮಾತನಾಡುವ ಪ್ರಸಂಗ ಬಂದರೆ ಹಿಂದೆ ಹೋಗುತ್ತಿದೆ. ಈಗ ಧೈರ್ಯ ಬಂದಿದೆ. ಇದೇ ಮೊದಲು ಮಾತನಾಡುತ್ತಿದ್ದೇನೆ. ಮಹೇಶ್ ಅವರು ಹೇಳಿದ್ದ ಕಥೆ ಇಷ್ಟವಾಯಿತು. ಧರ್ಮ ಕೀರ್ತಿರಾಜ್ ಅವರೆ ನಾಯಕರಾಗಲಿ ಎಂದೆ. ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಒಂದು ಪಾತ್ರವನ್ನು ಮಾಡಿದ್ದೀನಿ ಎನ್ನುತ್ತಾರೆ ನಿರ್ಮಾಪಕ ಅಶೋಕ್ ಕವೇಟಿ. ಈ ಚಿತ್ರದಲ್ಲಿ ಹಾಡಿಲ್ಲ. ರೀ ರೆಕಾರ್ಡಿಂಗ್ ಅದ್ಭುತವಾಗಿದೆ ಅಂತಾ ಸಂಗೀತ ನಿರ್ದೇಶಕ ವಿನು ಮನಸು ತಿಳಿಸಿದರು.
ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ನೀವೆಲ್ಲಾ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. ಈಗ ನನ್ನ ಮಗನಿಗೂ ನಿಮ್ಮಿಂದ ಆದೇ ಪ್ರೋತ್ಸಾಹ ಸಿಗುತ್ತಿದೆ. 'ವಸುಂಧರದೇವಿ' ಚಿತ್ರದ ಟೀಸರ್ ಚೆನ್ನಾಗಿದೆ. ಚಿತ್ರ ಯಶಸ್ಸು ಕಾಣಲಿ ಎಂದರು ಹಿರಿಯ ನಟ ಕೀರ್ತಿರಾಜ್. ಸದ್ಯ ವಸುಂಧರದೇವಿ ಚಿತ್ರದ ಟೀಸರ್ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 'ಕೌಸಲ್ಯಾ ಸುಪ್ರಜಾ ರಾಮ'ನಾದ ಡಾರ್ಲಿಂಗ್ ಕೃಷ್ಣ.. ಮೊಗ್ಗಿನ ಮೊನಸು ಖ್ಯಾತಿಯ ಶಶಾಂಕ್ ನಿರ್ದೇಶನ