ನವ ದೆಹಲಿ: 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಗುರುತಿಸಿಕೊಂಡು ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಎಂದು ಉಲ್ಲೇಖವಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಇಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 26 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಪ್ರಕರಣದಲ್ಲಿ ಇತ್ತೀಚೆಗೆ ಸಲ್ಲಿಸಲಾಗಿದ್ದ ಪೂರಕ ಆರೋಪ ಪಟ್ಟಿಯನ್ನೂ ಸಹ ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಇಡಿ ತಿಳಿಸಿದೆ. ಈ ಪ್ರಕರಣ ಸಂಬಂಧ ಇಡಿ ಸಲ್ಲಿಸಿದ್ದ ಮೊದಲ ಚಾರ್ಜ್‌ಶೀಟ್‌ನಲ್ಲಿ ಸುಕೇಶ್ ಚಂದ್ರಶೇಖರ್ ವಂಚಿಸಿದ್ದ ಹಣವನ್ನು ಹೇಗೆ ಬಳಸಿದ್ದಾನೆ ಎಂದು ವಿವರಿಸಲಾಗಿದೆ. ಪೂರಕ ಆರೋಪಪಟ್ಟಿಯಲ್ಲಿ, ಈತ ವಂಚಿಸಿದ ಮೊತ್ತದಿಂದ 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಫರ್ನಾಂಡೀಸ್ಗೆ ನೀಡಿದ್ದಾನೆ. ಅಪರಾಧದ ಆದಾಯದಿಂದಲೇ ಉಡುಗೊರೆಗಳನ್ನು ಖರೀದಿಸಲಾಗಿದೆ ಎಂಬ ವಿಚಾರ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ತಿಳಿದಿತ್ತು ಎಂದು ಇಡಿ ಕೋರ್ಟ್‌ಗೆ ಹೇಳಿದೆ.
ಇದನ್ನೂ ಓದಿ: ಸುಕೇಶ್ನಿಂದ ಉಡುಗೊರೆ ಪಡೆದಿಲ್ಲ ಅದು ನನ್ನ ಕಷ್ಟಾರ್ಜಿತ ಹಣ.. ನಟಿ ಜಾಕ್ವೆಲಿನ್
ಆದರೆ, ಈ ಆರೋಪವನ್ನು ಫರ್ನಾಂಡೀಸ್ ತಿರಸ್ಕರಿಸಿದ್ದರು. ಚಾರ್ಜ್‌ಶೀಟ್‌ನಲ್ಲಿ ಇಡಿ ತನ್ನನ್ನು ಆರೋಪಿ ಎಂದು ಗುರುತಿಸಿದೆ. ಸುಕೇಶ್ ಚಂದ್ರಶೇಖರ್ ಅವರಿಂದ ಹಣ ಪಡೆದು ಅದನ್ನು ಎಫ್ಡಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಅದು ಸುಳ್ಳು. ಅವರಿಂದ ನಾನು ಹಣ ಪಡೆದಿಲ್ಲ. ಅದೆಲ್ಲವೂ ನನ್ನ ಕಷ್ಟಾರ್ಜಿತ ದುಡ್ಡಾಗಿದೆ ಎಂದು ನಟಿ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಕೆ