ಬೆಂಗಳೂರು: ನಟ ಸುದೀಪ್ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದ ಆರೋಪ ಸಂಬಂಧ ಚಿತ್ರ ನಿರ್ಮಾಪಕರಾದ ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ಅವರು ಆಗಸ್ಟ್ 26 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಸಮನ್ಸ್ ಜಾರಿ ಮಾಡಿದೆ. ತಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ, ವರ್ಚಸ್ಸಿಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಸುದೀಪ್ ಅವರು ಎಂ.ಎನ್. ಕುಮಾರ್ ಮತ್ತು ಎಂ.ಎನ್.ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಕಳೆದ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸುದೀಪ್, ಆರೋಪಿಗಳ ವಿರುದ್ಧದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸ್ವಯಂ ಪ್ರಮಾಣೀಕೃತ ಹೇಳಿಕೆ ದಾಖಲಿಸಿದ್ದರು. ಈ ಕುರಿತ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು.
ನಿನ್ನೆ ನಡೆದ ವಿಚಾರಣೆಯಲ್ಲಿ ಸುದೀಪ್ ಅವರು, ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ತಮಗೆ ಹಣದ ನೆರವು ನೀಡಿರುವುದಾಗಿ ಸುಳ್ಳು ಹೇಳಿದ್ದಾರೆ. ಇದರಿಂದಾಗಿ ಹಲವರು ತಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ 22 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಗಳಿಸಿದ ಹೆಸರು ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ ಎನ್ನುವುದೂ ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಿದ್ದರು.
ಇದನ್ನೂ ಓದಿ: Sudeep: ನಿರ್ಮಾಪಕರ ವಿರುದ್ಧ ಮಾನಹಾನಿ ಆರೋಪ ಕೇಸ್; ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ ನಟ ಸುದೀಪ್