'ಲವ್ ಮಾಕ್ಟೇಲ್' ಸಿನಿಮಾ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ. ಅದರ ನಂತರ ಬಂದ ದಿಲ್ ಪಸಂದ್ ಮತ್ತು ಲವ್ ಬರ್ಡ್ಸ್ ಚಿತ್ರಗಳು ಅಂದುಕೊಂಡಂತೆ ಯಶಸ್ಸು ಕಾಣದಿದ್ದರೂ ಸ್ಯಾಂಡಲ್ವುಡ್ನಲ್ಲಿ ಕೃಷ್ಣನ ಬೇಡಿಕೆ ಮಾತ್ರ ಆಗಿಲ್ಲ. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡ್ತಾ ಇರೋ ನಟ ಸದ್ಯ 'ಲವ್ ಮಿ ಆರ್ ಹೇಟ್ ಮಿ' ಅಂತಾ ಜಪ ಮಾಡ್ತಾ ಇದ್ದಾರೆ.
ಹೌದು. ಡಾರ್ಲಿಂಗ್ ಕೃಷ್ಣ ಬೆಳ್ಳಿತೆರೆಯಲ್ಲಿ ನಾಯಕನಾಗಿ ನಟಿಸಲು ಪ್ರಾರಂಭಿಸಿ ದಶಕಗಳೇ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ತಾವೇ ಸಿನಿಮಾಗಳಿಗೆ ಕಥೆ ಬರೆದು, ನಿರ್ದೇಶಿಸಿ, ನಟಿಸಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಇವರ ಕೈಯಲ್ಲಿ ಕೌಸಲ್ಯ ಸುಪ್ರಜಾ ರಾಮ, ಶುಗರ್ ಫ್ಯಾಕ್ಟರಿ, ಲವ್ ಮಿ ಆರ್ ಹೇಟ್ ಮಿ ಸಿನಿಮಾಗಳಿವೆ.
ಅದರಲ್ಲಿ 'ಲವ್ ಮಿ ಆರ್ ಹೇಟ್ ಮಿ' ಬಿಡುಗಡೆಗೆ ಸಜ್ಜುಗೊಂಡಿದೆ. ಸಿನಿಮಾ ಟೈಟಲ್ ಕೇಳುವಾಗಲೇ ಡಾ.ರಾಜ್ಕುಮಾರ್ ಅಭಿನಯದ ಶಂಕರ್ ಗುರು ಸಿನಿಮಾದ ಹಾಡೇ ನೆನಪಿಗೆ ಬರುತ್ತದೆ. ಈ ಚಿತ್ರದ ಶೂಟಿಂಗ್ ಕೂಡ ಸೈಲೆಂಟ್ ಆಗಿಯೇ ಮುಕ್ತಾಯಗೊಂಡಿದ್ದು, ಕೃಷ್ಣ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Raj B Shetty’s Toby: ರಾಜ್ ಬಿ ಶೆಟ್ರ 'ಟೋಬಿ' ಮೋಷನ್ ಪೋಸ್ಟರ್ ಔಟ್; ಸಿನಿಮಾ ಬಿಡುಗಡೆ ದಿನವೂ ಫಿಕ್ಸ್
ಇದು ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾವಾಗಿದ್ದು, ದೀಪಕ್ ಗಂಗಾಧರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಸಿನಿಮಾದಲ್ಲಿ ಕೃಷ್ಣ, ರಚಿತಾ ಅಲ್ಲದೇ ರೂಪೇಶ್ ಶೆಟ್ಟಿ, ನಂದಿನಿ, ರಾಕೇಶ್ ಪೂಜಾರಿ, ದೀಪಿಕಾ, ಪ್ರವೀಣ್, ಸುಂದರ್ ವೀಣಾ, ರಮೇಶ್ ಭಟ್ ನಟಿಸಿದ್ದಾರೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀನಿಧರ್ ಸಂಭ್ರಮ್ ಮತ್ತು ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಮುರಳಿ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.
ಇನ್ನು ಚಿತ್ರಕ್ಕೆ ಯೋಗಾನಂದ್ ಮುದ್ದಾನ್, ರಘು ನಡವಳ್ಳಿ ಹಾಗೂ ರಘು ಸಂಭಾಷಣೆ ಬರೆದಿದ್ದಾರೆ. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ ಗಂಗಾಧರ್ ಅವರ ಜೊತೆಗೆ ಸುನೀಲ್ ಬಿ.ಎನ್, ಮದನ್ ಗಂಗಾಧರ್, ಚಂದನ್ ಜೆ ಹಾಗೂ ನಾಗರಾಜ್ ಗೌಡ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜಾನರ್ನ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಶೂಟಿಂಗ್ ಮಾತ್ರ ಬಾಕಿಯಿದ್ದು, ಈ ಚಿತ್ರವನ್ನು ಸೆಪ್ಟೆಂಬರ್ 29 ರಂದು ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ: Kiccha Sudeep: ಮೈಸೂರು ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ, ಅಭಿಮಾನಿಗಳ ನೂಕುನುಗ್ಗಲು