2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ (Dalip Tahil) ಅವರು ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಸಿಲುಕಿಕೊಂಡಿದ್ದರು. ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪ ನಟನ ಮೇಲಿತ್ತು. 2018ರಿಂದ ನಟ ಕಾನೂನು ಹೋರಾಟ ನಡೆಸುತ್ತಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಅಂತಿಮವಾಗಿ ತೀರ್ಪು ಬಂದಿದ್ದು, ದಲೀಪ್ ತಾಹಿಲ್ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ವರದಿಗಳ ಪ್ರಕಾರ, ಹಿರಿಯ ನಟನ ಉಸಿರಾಟದಲ್ಲಿ ಆಲ್ಕೋಹಾಲ್ ವಾಸನೆಯನ್ನು ಗಮನಿಸಿದ ವೈದ್ಯರ ಸಾಕ್ಷ್ಯವನ್ನು ಆಧರಿಸಿ ಈ ಶಿಕ್ಷೆ ವಿಧಿಸಲಾಗಿದೆ. 2018ರಲ್ಲಿ ಅಪಘಾತ ನಡೆದ ಸಂದರ್ಭ ಆಲ್ಕೋಹಾಲ್ ಪರೀಕ್ಷೆಗೆ ರಕ್ತದ ಮಾದರಿ ನೀಡದೇ, ಪೊಲೀಸ್ ತನಿಖೆಗೆ ಸಹಕಾರ ನೀಡಿರಲಿಲ್ಲ.
ಏನಿದು ಪ್ರಕರಣ? 2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ ಅವರ ಗಾಡಿ ಅಪಘಾತಕ್ಕೊಳಗಾಗಿತ್ತು. ನಟನ ಕಾರು ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿತ್ತು. ಪರಿಣಾಮ, ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಸ್ಥಳದಿಂದ ಪರಾರಿಯಾಗಲು ಸಹ ಪ್ರಯತ್ನಿಸಿದ್ದರು. ಆದ್ರೆ ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ಹಿನ್ನೆಲೆ ಉಂಟಾದ ಟ್ರಾಫಿಕ್ ಜಾಮ್‌ನಿಂದಾಗಿ ಆ ಪ್ರಯತ್ನ ವಿಫಲವಾಯಿತು. ಜೆನಿತಾ ಗಾಂಧಿ (21) ಹಾಗೂ ಗೌರವ್ ಚುಗ್ (22) ಎಂಬಿಬ್ಬರು ಪ್ರಯಾಣಿಕರು ನಟನ ಕಾರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ವಾಗ್ವಾದ ನಡೆದಿದ್ದು, ಆ ಸಮಯದಲ್ಲಿ ನಟ ಅವರನ್ನು ತಳ್ಳಿದ್ದರು. ವಾಗ್ವಾದ ಜೋರಾಗಿ, ಪೊಲೀಸರನ್ನು ಕರೆಸಲಾಯಿತು. ನಟ ದಲೀಪ್ ತಾಹಿಲ್ ಅವರನ್ನು ವಶಕ್ಕೆ ಪಡೆಯಲಾಯಿತು.
ಡಿಕ್ಕಿಯ ರಭಸಕ್ಕೆ ಇಬ್ಬರು ಪ್ರಯಾಣಿಕರ ಪೈಕಿ, ಜೆನಿತಾ ಗಾಂಧಿ ಅವರ ಬೆನ್ನು ಮತ್ತು ಕುತ್ತಿಗೆಗೆ ತೀವ್ರ ಪೆಟ್ಟಾಗಿತ್ತು. ಆಟೋರಿಕ್ಷಾ - ಕಾರು ಡಿಕ್ಕಿಯಾದ ನಂತರ, ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮತ್ತು ಗೌರವ್ ಚುಗ್ ಅವರು ನಟ ದಲೀಪ್ ತಾಹಿಲ್ ಅಲ್ಲಿಂದ ಪಲಾಯನ ಮಾಡಲೆತ್ನಿಸಿದ್ದನ್ನು ಗಮನಿಸಿದರು. ಆದರೆ, ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆ ಹಿನ್ನೆಲೆ ತೀವ್ರ ಟ್ರಾಫಿಕ್ ಜಾಮ್ ಇದ್ದಿದ್ದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸುದೀರ್ಘ ಕಾನೂನು ಹೋರಾಟದ ಬಳಿಕ ನಟ ದಲೀಪ್ ತಾಹಿಲ್ ಅವರಿಗೆ ಎರಡು ತಿಂಗಳು ಜೈಲುಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಪರಿಣಿತಿ ಚೋಪ್ರಾ ಜನ್ಮದಿನ: ಬಾಲಿವುಡ್ ತಾರೆಯ ಸಿನಿಪಯಣ ಇಲ್ಲಿದೆ
ಬಾಜಿಗರ್, ಕಯಾಮತ್ ಸೆ ಕಯಾಮತ್ ತಕ್, ಕಹೋ ನಾ ಪ್ಯಾರ್ ಹೈ ಮತ್ತು ಮಿಷನ್ ಮಂಗಲ್‌ನಂತಹ ಸೂಪರ್ ಹಿಟ್ ಸಿನಿಮಾ ಸೇರಿದಂತೆ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ದಲೀಪ್ ತಾಹಿಲ್, ತಮ್ಮ ಶಿಕ್ಷೆಯ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಕಾಮಿಡಿ ವಿಡಿಯೋಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಗಳಿಸಿದ್ದರು.