ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲು ತೀರ್ಮಾನವಾಗಿದೆ. ನವೆಂಬರ್ 1ರ ಸಂಜೆ 4 ಗಂಟೆಗೆ ವಿಧಾನ ಸೌಧದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಭೆ ನಡೆಸಿದರು. ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಡಾ. ಸುಧಾಕರ್, ಗೋಪಾಲಯ್ಯ, ಸುನಿಲ್ ಕುಮಾರ್, ಬೈರತಿ ಬಸವರಾಜ್, ರಾಜ್ ಕುಟುಂಬದವರಾದ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಅಪ್ಪು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಚಿವರುಗಳ ಜೊತೆ ಸಿಎಂ ಚರ್ಚಿಸಿದರು. ಕಾರ್ಯಕ್ರಮದ ರೂಪುರೇಷೆ ಕುರಿತು ರಾಜ್ ಕುಟುಂಬ ಸದಸ್ಯರ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನವೆಂಬರ್ 1ರಂದು ವಿಧಾನಸೌಧದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
2009ರ ನಂತರ ಯಾರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರಲಿಲ್ಲ. ಈಗ 8 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಾಗುವುದು. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ ಕರ್ನಾಟಕ ರತ್ನ. ಅವರು ಯುವಜನತೆಗೆ ಸದಾ ಪ್ರೇರಣೆ ನೀಡುತ್ತಿದ್ದರು. ಪುನೀತ್ ಹೆಸರು ಚಿರಸ್ಥಾಯಿಯಾಗಬೇಕು, ಪ್ರೇರಣೆಯಾಗಬೇಕು ಎಂದು ಈ ಪುರಸ್ಕಾರ ನೀಡಲಾಗುತ್ತಿದೆ. ಹಲವಾರು ಶ್ರೇಷ್ಠ ಸಾಹಿತಿಗಳು, ಮುಖ್ಯ ಅತಿಥಿಗಳು, ನಟರು, ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನಾಳೆ ಪುನೀತ್ ಪರ್ವ ಕಾರ್ಯಕ್ರಮ: ಮೋಹಕ ತಾರೆ ರಮ್ಯಾರಿಂದ ಡ್ಯಾನ್ಸ್ ಫರ್ಫಾಮೆನ್ಸ್
ನವೆಂಬರ್ 1ರ ಕಾರ್ಯಕ್ರಮದ ಬಳಿಕ ಬೆಂಗಳೂರಿನಲ್ಲಿ ಮೂರು ಕಾರ್ಯಕ್ರಮ ಮಾಡಲಿದ್ದೇವೆ. 10 ದಿನಗಳ ಅಂತರದಲ್ಲಿ ಬೆಂಗಳೂರಿನ ಮೂರು ಭಾಗಗಳಲ್ಲಿ ಅಪ್ಪು ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಿದ್ದೇವೆ ಎಂದರು.
ಕನ್ನಡ ಮೂಲದ ಪರಭಾಷಾ ತಾರೆ ಕರೆಸಲು ಚಿಂತನೆ:
ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕರ್ನಾಟಕ ಮೂಲದ ಒಬ್ಬರು ಪರಭಾಷಾ ನಟ ಅಥವಾ ನಟಿಗೆ ಆಹ್ವಾನ ಕೊಡುವ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆದಿದೆ. ಕನ್ನಡದಲ್ಲಿ ಮಾತಾಡುವಂಥ ನಟ ಅಥವಾ ನಟಿಗೆ ಆಹ್ವಾನ ಕೊಡುವ ಬಗ್ಗೆ ಮಾತುಕತೆ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಪೈಕಿ ಒಬ್ಬರನ್ನು ಕರೆಸುವ ಬಗ್ಗೆ ಚರ್ಚೆಯಾಗಿದೆ. ಆದರೆ ಈ ಸಂಬಂಧ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂದು ತಿಳಿದುಬಂದಿದೆ.
ಪಿಎಫ್ಐ ಷಡ್ಯಂತ್ರ ಬಯಲು: ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಪಿಎಫ್ಐ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ. ಹಲವೆಡೆ ವಿಧ್ವಂಸಕ ಕೃತ್ಯ ಎಸಗಬೇಕು, ದೇಶವ್ಯಾಪಿ ಅಶಾಂತಿ ನಿರ್ಮಾಣ ಮಾಡಬೇಕು ಅನ್ನೋ ಅವರ ಷಡ್ಯಂತ್ರ ಬಯಲಾಗಿದೆ. ಭಾರತದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರವಿದು. ಈಗಾಗಲೇ ಉನ್ನತ ಮಟ್ಟದ ತನಿಖೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಕ್ರಮ ತೆಗೆದುಕೊಂಡಿದೆ ಎಂದರು.