ಬಹುನಿರೀಕ್ಷಿತ ರಾಮಮಂದಿರ ಉದ್ಘಾಟನೆಗೆ ಭರದ ಸಿದ್ಧತೆ ನಡೆಯುತ್ತಿವೆ. ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಜನವರಿ 22ರಂದು ನೆರವೇರಲಿದೆ. ಈ ಶುಭ ಸಂದರ್ಭಕ್ಕಾಗಿ ದೇಶ-ವಿದೇಶಗಳ ಗಣ್ಯರನ್ನು ಆಹ್ವಾನಿಸುವ ಪ್ರಕ್ರಿಯೆ ಮುಂದುವರಿದಿದೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಈ ಕಾರ್ಯಕ್ರಮಕ್ಕೆ ಸಿನಿಮಾ ಕ್ಷೇತ್ರದ ಖ್ಯಾತನಾಮರೂ ಕೂಡ ಭಾಗಿ ಆಗಲಿದ್ದಾರೆ.
ಈಗಾಗಲೇ ಬಾಲಿವುಡ್ ಮತ್ತು ದಕ್ಷಿಣ ಸೇರಿ ಭಾರತೀಯ ಚಿತ್ರರಂಗದ ಹಲವು ತಾರೆಯರನ್ನು ಆಹ್ವಾನಿಸಲಾಗಿದೆ. ಇತ್ತೀಚೆಗಷ್ಟೇ ಬಾಲಿವುಡ್ ತಾರಾ ಜೋಡಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನೂ ಆಹ್ವಾನಿಸಲಾಗಿತ್ತು. ಈ ಆಹ್ವಾನ ಪ್ರಕ್ರಿಯೆ ಮುಂದುವರಿದಿದೆ.
ಧನುಷ್, ಜಾಕಿ ಶ್ರಾಫ್ ಸೇರಿ ಹಲವರಿಗೆ ಆಹ್ವಾನ: ಇಂದು ಬಾಲಿವುಡ್ನ ಹಿರಿಯ ನಟ ಜಾಕಿ ಶ್ರಾಫ್ ಮತ್ತು ಅವರ ಇಡೀ ಕುಟುಂಬ ಆಹ್ವಾನ ಪತ್ರಿಕೆ ಸ್ವೀಕರಿಸಿದೆ. ಇತ್ತೀಚೆಗೆ ದಾಂಪತ್ಯ ಜೀವನ ಆರಂಭಿಸಿರುವ ನಟ ರಣದೀಪ್ ಹೂಡಾ ಮತ್ತು ಅವರ ಪತ್ನಿ ಲಿನ್ ಲೈಶ್ರಾಮ್ ಸಹ ಆಹ್ವಾನಿಸಲ್ಪಟ್ಟಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣ ಚಿತ್ರರಂಗದ ಖ್ಯಾತ ನಟ, ಸದ್ಯ ಕ್ಯಾಪ್ಟನ್ ಮಿಲ್ಲರ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಧನುಷ್ ಕೂಡ ರಾಮಮಂದಿರ ಕಾರ್ಯಕ್ರಮದ ಆಹ್ವಾನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ: ಕನ್ನಡದಲ್ಲಿ ಬಂತು 'ಹನುಮಾನ್ ಚಾಲಿಸಾ'
ಈ ಶುಭಸಂದರ್ಭಕ್ಕೆ ಸಾಕ್ಷಿಯಾಗಲು ಆಹ್ವಾನ ಸ್ವೀಕರಿಸಿರುವ ಹಿರಿಯ, ಖ್ಯಾತ ನಟ ಜಾಕಿ ಶ್ರಾಫ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ-ಪ್ರತಿಷ್ಠಾಪನೆ ಸಮಾರಂಭದ ಭಾಗವಾಗಲು ನಾವು ಹೆಮ್ಮೆಪಡುತ್ತೇವೆ. ಭಾರತೀಯರ ಜೀವನದಲ್ಲಿ ಇದು ಐತಿಹಾಸಿಕ ಕ್ಷಣ. ಇದಕ್ಕಾಗಿ ಹಲವು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ ಮತ್ತು ಕೊಡುಗೆ ನೀಡಿದ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಜಾಕಿ ಶ್ರಾಫ್ ಪತ್ನಿ ಆಯೇಶಾ ಶ್ರಾಫ್ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇದನ್ನೇ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಗಾಸಿಪ್! ಸತ್ಯಾಂಶವೇನು?
ಇದಕ್ಕೂ ಮುನ್ನ ಖ್ಯಾತ ಗಾಯಕ ಸೋನು ನಿಗಮ್, ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಆಹ್ವಾನಿಸಲಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅನೇಕ ಭಾರತೀಯ ಮತ್ತು ವಿದೇಶಿ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಕನ್ನಡದ ಯಶ್, ರಿಷಬ್ ಶೆಟ್ಟಿ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ. ಜನವರಿ 16 ರಿಂದಲೇ ಕಾರ್ಯಕ್ರಮಗಳು ನಡೆಯಲಿದೆ.