'ದಿಯಾ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನ ಭರವಸೆಯ ನಟನಾಗಿ ಗುರುತಿಸಿಕೊಂಡವರು ದೀಕ್ಷಿತ್ ಶೆಟ್ಟಿ. ಕನ್ನಡ ಮಾತ್ರವಲ್ಲದೇ, ತೆಲುಗು ಚಿತ್ರಗಳನ್ನೂ ಮಾಡುತ್ತಿರುವ ಹ್ಯಾಂಡ್ಸಮ್ ಹಂಕ್ ಇದೀಗ 'ಬ್ಲಿಂಕ್' ಗುಂಗಿನಲ್ಲಿದ್ದಾರೆ. ಕ್ಯಾಚಿ ಟೈಟಲ್ ಹೊಂದಿರುವ ಈ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ಮೊದಲ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಇದು ರ್‍ಯಾಪ್ ಶೈಲಿಯ ಹಾಡಾಗಿದ್ದು, ಭಾರತದ ಪಾರಂಪರಿಕ ಸಂಗೀತವನ್ನು ಒಳಗೊಂಡಿದೆ. ಪ್ರಖ್ಯಾತ ರ್‍ಯಾಪರ್ ಅನೂಪ್ ಕಾಟಕೊಡು ಸಾಹಿತ್ಯ ಬರೆದಿದ್ದಾರೆ. ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಎಂ.ಎಸ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಕೌಮುದಿ ಅವರು ದನಿಯಾಗುವ ಮೂಲಕ ಕನ್ನಡಿಗರಿಗೆ ಪರಿಚಯವಾಗಲಿದ್ದಾರೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಆತನ ಸುತ್ತಮುತ್ತಲಿನ ವಾತಾವರಣವನ್ನು ಬದಲಿಸುತ್ತದೆ ಎಂಬುದು ಕಥೆಯ ಸಾರಾಂಶ.
ಚಿತ್ರತಂಡ: 'ಬ್ಲಿಂಕ್' ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿಗೆ ಚೈತ್ರಾ.ಜೆ.ಆಚಾರ್ ಜೋಡಿಯಾಗಿದ್ದಾರೆ. ಇವರ ಜೊತೆ ಮಂದಾರ ಬಟ್ಟಲಹಳ್ಳಿ, ವಜ್ರಧೀರ್ ಜೈನ್, ಗೋಪಾಲ ಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್ ಮತ್ತು ಹಲವಾರು ಕಲಾವಿದರು ಇದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗಿರ್ದಾರ್ ಸಂಕಲನವಿದೆ. ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ರವಿಚಂದ್ರ ಎ.ಜೆ. ನಿರ್ಮಾಣ ಮಾಡುತ್ತಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನ ಚೊಚ್ಚಲ ಚಿತ್ರ ಇದಾಗಿದೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರ 'ಸಿಕಾಡಾ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ಮೇಘನಾ ರಾಜ್, ಪ್ರಜ್ವಲ್ ದೇವರಾಜ್
ಹಳ್ಳಿ ಹುಡುಗಿಯಾಗಿ ಚೈತ್ರಾ: ಚೈತ್ರಾ.ಜೆ.ಆಚಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೂ ಮುನ್ನ ಮಹಿರಾ, ತಲೆದಂಡ, ಆ ದೃಶ್ಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 90ರ ದಶಕದ ಸೆಮಿ ಮಾಡರ್ನ್ ಹಳ್ಳಿ ಹುಡುಗಿಯಾಗಿ ಬ್ಲಿಂಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇವಕಿ ಅರಸ್ ಆಗಿ ನಟಿಸಿರುವ ಇವರದ್ದು ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ. ಈ ಮೊದಲು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ರಿವೀಲ್ ಆಗಿತ್ತು. ಇದು ಸಿನಿಪ್ರಿಯರ ಕುತೂಹಲ ಹೆಚ್ಚಿಸಿತ್ತು. ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳಿರಲಿದ್ದು, ದೀಕ್ಷಿತ್ ಶೆಟ್ಟಿ, ಚೈತ್ರಾ ಜೆ. ಆಚಾರ್ ಹಾಗೂ ಮಂದಾರ ಬಟ್ಟಲಹಳ್ಳಿ ಪಾತ್ರಗಳು ಗಮನ ಸೆಳೆಯಲಿವೆ. ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾತರರಾಗಿದ್ದಾರೆ.
ಇದನ್ನೂ ಓದಿ: 'ದಸರಾ' ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟ