'ಬ್ಲಿಂಕ್' ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ದಿಯಾ ಹಾಗೂ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಜೊತೆ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ಅಭಿನಯಿಸಿರುವ 'ಬ್ಲಿಂಕ್' ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬ್ಲಿಂಕ್ ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಆಗಂತುಕ ಸಾಂಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಬ್ಲಿಂಕ್ ಅಂಗಳದಿಂದ ಸಖಿಯೆ ಎಂಬ ಮೆಲೋಡಿ ಹಾಡು ಹೊರಬಂದಿದೆ. ಪ್ರಮೋದ್ ಮರವಂತೆ ಸಾಹಿತ್ಯಕ್ಕೆ, ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದು, ಪ್ರಸನ್ನ ಕುಮಾರ್ ಎಂ.ಎಸ್ ಸಾಹಿತ್ಯ ಒದಗಿಸಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಚಿತ್ರತಂಡ ಕೆಲ ವಿಚಾರಗಳನ್ನ ಹಂಚಿಕೊಂಡಿದೆ .
ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ರಂಗಭೂಮಿ ಜೊತೆ ಜೊತೆಗೆ ಸಿನಿಮಾ ಮಾಡಬೇಕೆಂಬ ಕನಸು ಇತ್ತು. ಕೋವಿಡ್ ಸಮಯದಲ್ಲಿ ಒಂದಿಷ್ಟು ಸಿನಿಮಾ ನೋಡುತ್ತಾ, ನಾವೇಕೆ ಈ ರೀತಿಯ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಬಾರದೆಂಬ ಯೋಚನೆ ಬಂತು. ಅಮತಿಮವಾಗಿ, ಸ್ನೇಹಿತರು ಮತ್ತು ರಂಗಭೂಮಿ ಗೆಳೆಯರಿಂದ ಈ ಸಿನಿಮಾ ತಯಾರಾಗಿದೆ. ಪ್ರಕೃತಿ ನಮಗೆ ಬೆಂಬಲ ಕೊಟ್ಟಿದೆ ಎಂದು ತಿಳಿಸಿದರು.
ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ಬ್ಲಿಂಕ್ ಸಿನಿಮಾ ಯಾವುದೇ ಪರ್ಟಿಕ್ಯುಲರ್ ಜಾನರ್ಗೆ ಸೇರಿಲ್ಲ. ಸೈನ್ಸ್ ಫಿಕ್ಷನ್ ಎಂಬ ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಮನುಷ್ಯತ್ವ, ಮನುಷ್ಯ ಪ್ರೀತಿಯನ್ನು ಸಿನಿಮಾ ತೋರಿಸಿಕೊಡುತ್ತದೆ. ಸೈನ್ಸ್ ಫಿಕ್ಷನ್ ಎಂದರೆ ಒಂದು ಲ್ಯಾಬ್ ಅಥವಾ ಬೇರೆ ಪ್ರಪಂಚದಲ್ಲಿ ನಡೆಯುವ ಕಥೆಯಾಗಿರುತ್ತದೆ. ಆದ್ರೆ ಇದು ಹಾಗಲ್ಲ. ನಮ್ಮಂತಹ ಮಧ್ಯಮ ವರ್ಗದ ನಡುವೆ ಸೈನ್ಸ್ ಫಿಕ್ಷನ್ ಆದರೆ ಏನೆಲ್ಲಾ ಕಳವಳ ಆಗಬಹುದು. ಎಂತಹ ಸನ್ನಿವೇಶಗಳನ್ನು ಎದುರಿಸಬಹುದು ಅನ್ನೋದೇ ಈ ಸಿನಿಮಾದ ಕಥೆ ಎಂದು ತಿಳಿಸಿದರು.
ಇದನ್ನೂ ಓದಿ: ಬಹುನಿರೀಕ್ಷಿತ 'ಕಣ್ಣಪ್ಪ' ಸಿನಿಮಾದಲ್ಲಿ ಶಿವ ರಾಜ್ಕುಮಾರ್: ಒಂದೇ ಚಿತ್ರದಲ್ಲಿ ಘಟಾನುಘಟಿಗಳು
ನಟಿ ಮಂದಾರ ಮಾತನಾಡಿ, ನಾನು ಸ್ವಪ್ನ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಮ್ಮ ನಿರ್ದೇಶಕರು ನನಗೆ ಐದಾರು ವರ್ಷಗಳಿಂದ ಪರಿಚಯ. ಅವರೇ ನಾಟಕಗಳನ್ನು ಬರೆದು, ನಟಿಸೋ ಜೊತೆ ನಿರ್ದೇಶಿಸುತ್ತಿದ್ದರು. ಅಂದಿನಿಂದ ಅವರು ನನಗೆ ಸ್ನೇಹಿತರು. ಬ್ಲಿಂಕ್ ಸಿನಿಮಾದ ಸ್ಕ್ರಿಪ್ಟ್ ಕೇಳಿದಾಗ ಖುಷಿಯಾಯಿತು. ನಾನು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಕನ್ನಡದಲ್ಲಿ ಲೂಸಿಯಾ, ಬೆಲ್ ಬಾಟಂ, ರಂಗಿತರಂಗ ಸಿನಿಮಾಗಳು ಹೇಗೆ ಕ್ರಾಂತಿ ಮಾಡಿದವೋ ಹಾಗೆಯೇ ಈ ಚಿತ್ರವೂ ಮೈಲಿಗಲ್ಲಾಗಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಟ್ರೆಂಡಿಂಗ್ ಆ್ಯಕ್ಟರ್, ಐಕಾನಿಕ್ ಡೈರೆಕ್ಟರ್ ಪ್ರಶಸ್ತಿ ಮುಡಿಗೇರಿಸಿಕೊಂಡ ರಕ್ಷಿತ್ - ರಿಷಬ್
ಜನನಿ ಪಿಕ್ಚರ್ಸ್ ಬ್ಯಾನರ್ ಅಡಿ ಮೂಡಿ ಬರುತ್ತಿರುವ ಬ್ಲಿಂಕ್ ಕನ್ನಡದಲ್ಲಿ ಒಂದು ಹೊಸ ಶೈಲಿಯ ಸಿನಿಮಾ. ಕನ್ನಡದ ಮಟ್ಟಿಗೆ ಹೊಸ ಪ್ರಯೋಗ. ಸಿನಿಮಾಗೆ ರವಿಚಂದ್ರ ಎ ಜೆ ಬಂಡವಾಳ ಹೂಡಿದ್ದು, ಶ್ರೀನಿಧಿ ಬೆಂಗಳೂರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಹೆಜ್ಜೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಅವನ ಸುತ್ತ- ಮುತ್ತಲಿನ ವಾತಾವರಣವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಚಿತ್ರದಲ್ಲಿ ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ, ಕಿರಣ್ ನಾಯ್ಕ್ ಕಾಣಿಸಿಕೊಳ್ಳಲಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ ಮತ್ತು ಸಂಜೀವ್ ಜಾಗಿರ್ದಾರ್ ಅವರ ಸಂಕಲನ ಈ ಚಿತ್ರಕ್ಕಿದೆ.