ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗು ಮಾಡೆಲ್ ಉರ್ಫಿ ಜಾವೇದ್ ಆಗಾಗ್ಗೆ ವಿಚಿತ್ರ ವೇಷಭೂಷದ ಮೂಲಕ ಕ್ಯಾಮರಾಗಳಲ್ಲಿ ಸೆರೆಯಾಗುತ್ತಾರೆ. ಇವರ ವಿಶಿಷ್ಟ ವೇಷಭೂಷಣ ಹಿನ್ನೆಲೆ ಕಟೌಟ್ ನಟಿ ಎಂದೇ ಹೆಸರುವಾಸಿಯಾಗಿದ್ದಾರೆ. ಇವರ ಉಡುಪಿನ ಶೈಲಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಬಹುತೇಕ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಆದ್ರೆ ಇವರು ಮಾತ್ರ ಡೋಂಟ್ ಕೇರ್ ಎನ್ನುತ್ತ, ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಸಕ್ರಿಯರಾಗಿದ್ದಾರೆ.
''ದೇಹದ ಅಂಗಾಂಗಗಳನ್ನು ಪ್ರದರ್ಶಿಸಿ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವ ಮಾಡೆಲ್ ಉರ್ಫಿ ಜಾವೇದ್ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು'' ಎಂದು ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಒತ್ತಾಯಿಸಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ ಸತ್ಯನಾರಾಯಣ ಚೌಧರಿ ಅವರನ್ನು ಭೇಟಿ ಮಾಡಿ ಉರ್ಫಿ ಜಾವೇದ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಮುಂಬೈ ಪೊಲೀಸರು ಈ ಅರ್ಜಿಯ ಬಗ್ಗೆ ಗಮನ ಹರಿಸಿರಿದ್ದಾರೆ ಎಂದು ಹೇಳಲಾಗ್ತಿದೆ.
ಚಿತ್ರಾ ವಾಘ್ ಒತ್ತಾಯ ಏನು? ನಟಿ ಉರ್ಫಿ ಜಾವೇದ್ ರಸ್ತೆಯಲ್ಲಿ ತಮ್ಮ ದೇಹ ಪ್ರದರ್ಶಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಸಂವಿಧಾನ ನೀಡಿರುವ ನಡವಳಿಕೆಯ ಹಕ್ಕು, ಆಲೋಚನಾ ಸ್ವಾತಂತ್ರ್ಯವು ಇಂತಹ ಮುಕ್ತ ಮತ್ತು ದುರಹಂಕಾರದ ಧೋರಣೆಯಲ್ಲಿ ಉಪಯೋಗವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮುಂಬೈನ ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಯ ನಾಗರಿಕತೆಗೆ ಅವಮಾನವಾಗಿದೆ.
ಈ ನಟಿ ತನ್ನ ಖಾಸಗಿ ಜೀವನದಲ್ಲಿ ಮಾಡುವ ಕೆಲಸಕ್ಕೂ ಸಮಾಜಕ್ಕೂ ಸಂಬಂಧವಿಲ್ಲ. ಆದರೆ, ಕೇವಲ ಖ್ಯಾತಿ ಗಳಿಸಲು ಈ ನಟಿ ತನ್ನ ದೇಹವನ್ನು ಮಾರ್ಕೆಟಿಂಗ್ ಮಾಡಿರುವುದು ಬೇಸರ ತರಿಸಿದೆ. ತನ್ನ ದೇಹವನ್ನು ಪ್ರದರ್ಶಿಸಲು ಬಯಸಿದರೆ, ಅದನ್ನು ನಾಲ್ಕು ಗೋಡೆಗಳ ಹಿಂದೆ ಮಾಡಬೇಕು. ಆದರೆ ಈ ರೀತಿ ಭಾವನೆಗಳನ್ನು ಕೆರಳಿಸುವ ಕಾರ್ಯದಿಂದ ಸಮಾಜದಲ್ಲಿ ವಿಕೃತ ಮನೋಭಾವವನ್ನು ಹೆಚ್ಚಿಸುತ್ತಿದ್ದೇವೆ. ಈ ನಟಿಗೆ ಇದರ ಅರಿವೇ ಇಲ್ಲ. ಹಾಗಾಗಿ ನಟಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಆಗ್ರಹಿಸಿದೆ.
ಸಖತ್ ಸುದ್ದಿಯಾಗಿದ್ದ ಉರ್ಫಿ: ಕೆಲ ದಿನಗಳ ಹಿಂದೆ ಈ ಸೋಶಿಯಲ್ ಮೀಡಿಯಾ ಸ್ಟಾರ್ ಸುದ್ದಿಯಾಗಿದ್ದರು. ಉರ್ಫಿ ಜಾವೇದ್ ಅವರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದು ಒಂದು ವಿಷಯ. ಉರ್ಫಿ ಅವರೇ ದುಬೈನಲ್ಲಿ ಅರೆಸ್ಟ್ ಆಗಿದ್ದಾರೆಂಬುದು ಮತ್ತೊಂದು ವಿಷಯ ಆಗಿತ್ತು. ತಾನು ಅರೆಸ್ಟ್ ಆಗಿಲ್ಲ ಎಂದು ಸ್ವತಃ ನಟಿಯೇ ಸ್ಪಷ್ಟಪಡಿಸಿದ್ದರು. ಪೊಲೀಸರು ತಮ್ಮ ಶೂಟಿಂಗ್ ಸೆಟ್ ವಿಚಾರವಾಗಿ ಸ್ಥಳಕ್ಕೆ ಬಂದಿದ್ದರು ಎಂದು ನಟಿ ಮಾಹಿತಿ ನೀಡಿದ್ದರು. ಈ ಬಗ್ಗೆ ಉರ್ಫಿ ಜಾವೇದ್ ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಪಡ್ಡೆ ಹೈಕ್ಳ ನಿದ್ದೆ ಕದ್ದ ಕಟೌಟ್ ನಟಿ ಉರ್ಫಿ ಜಾವೇದ್ ನಾನಾ ಅವತಾರ!
ಈ ಎರಡೂ ಸುದ್ದಿಗಳು ಏಕಕಾಲದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದರೂ, ಜನರು ತನಗೆ ಬೆದರಿಕೆ ಹಾಕಿದ ವ್ಯಕ್ತಿಯ ಬಗ್ಗೆ ಕನಿಷ್ಠ ಆಸಕ್ತಿ ಹೊಂದಿದ್ದರು. ಆದರೆ ದುಬೈ ಪೊಲೀಸರು ನನ್ನನ್ನು ಜೈಲಿನಲ್ಲಿಡಬೇಕೆಂದು ಬಹುತೇಕ ನೆಟ್ಟಿಗರು ಬಯಸಿದ್ದರು ಎಂದು ವಿಡಿಯೋದಲ್ಲಿ ನಟಿ ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ ನಾನು ಯಾವುದೇ ನಕಾರಾತ್ಮಕತೆಯಿಂದ ವಿಚಲಿತಳಾಗಿಲ್ಲ. ತನ್ನದೇ ಆದ ರೀತಿಯಲ್ಲಿ ತನ್ನ ಜೀವನ ಮುಂದುವರಿಸುತ್ತೇನೆ ಎಂದು ದ್ವೇಷಿಗರಿಗೆ ನಟಿ ಖಡಕ್ ತಿರುಗೇಟು ಕೊಟ್ಟಿದ್ದರು. ತುಂಡುಡುಗೆ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸೋದನ್ನು ಮುಂದುವರಿಸಿದ್ದು, ಹಲವರಿಂದ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.