ಸೌತ್ನ ಮೆಗಾ ದಂಪತಿ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಇದಕ್ಕಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿರುವ ಈ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಹುಟ್ಟುವ ಮಗುವಿಗೆ ಪ್ರಜ್ವಲ ಫೌಂಡೇಶನ್ ಸುಂದರವಾದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದೆ.
ಉಪಾಸನಾ ಈ ತೊಟ್ಟಿಲಿನ ಮಹತ್ವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲೈಂಗಿಕ ಕಳ್ಳಸಾಗಣೆ ಕೂಪದಿಂದ ಹೊರಬಂದ ಮಹಿಳೆಯರಿಗೆ ಆಶ್ರಯ ನೀಡುವ ಪ್ರಜ್ವಲ ಫೌಂಡೇಶನ್ ಈ ತೊಟ್ಟಿಲನ್ನು ತಮಗೆ ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದಾರೆ. ಅಲ್ಲಿರುವ ಕೆಲವು ಮಹಿಳೆಯರೇ ಈ ಸುಂದರ ತೊಟ್ಟಿಲನ್ನು ಸಿದ್ಧಪಡಿಸಿದ್ದಾರೆ. ಅವರು ತಯಾರಿಸಿದ ಈ ತೊಟ್ಟಿಲಿಗೆ ಹೆಚ್ಚಿನ ಮಹತ್ವ ಇದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
"ಅತೀ ಶೀಘ್ರದಲ್ಲೇ ನಾವು ಮೂವರಾಗುತ್ತಿದ್ದೇವೆ. ನನ್ನ ಮಗುವಿಗೆ ನಿಮ್ಮ ಕೈಯಿಂದ ನೀಡಿದ ತೊಟ್ಟಿಲು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ಧೈರ್ಯ, ಶಕ್ತಿ, ಸ್ವಾಭಿಮಾನ ಮತ್ತು ಭರವಸೆಯ ಸಂಕೇತವಾಗಿ ನನ್ನ ಮಗುವಿನ ನೆನಪಿನಲ್ಲಿ ಉಳಿಯುತ್ತದೆ. ನಮ್ಮ ಸುಂದರ ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ಪ್ರಜ್ವಲ ಫೌಂಡೇಶನ್‌ಗೆ ವಿಶೇಷ ಧನ್ಯವಾದಗಳು" ಎಂದು ತೊಟ್ಟಿಲಿನ ಫೋಟೋ ಹಂಚಿಕೊಂಡ ಉಪಾಸನಾ ಕ್ಯಾಪ್ಶನ್ ಬರೆದಿದ್ದಾರೆ.
ಉಡುಗೊರೆಯಾಗಿ ನೀಡಿರುವ ತೊಟ್ಟಿಲನ್ನು ಮರದಿಂದ ಮಾಡಲಾಗಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ಕೆಲ ನೆಟ್ಟಿಗರು ಹುಟ್ಟಲಿರುವ ಮಗುವಿಗಾಗಿ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಏತನ್ಮಧ್ಯೆ, ಈ ವರ್ಷ ಜುಲೈನಲ್ಲಿ ಉಪಾಸನಾ ಮಗುವಿಗೆ ಜನ್ಮ ನೀಡಲಿದ್ದಾರೆ.
ಇದನ್ನೂ ಓದಿ: ವೀರ್ ಸಾವರ್ಕರ್ ಜಯಂತಿಯಂದೇ ರಾಮ್ ಚರಣ್ ನಿರ್ಮಾಣದ 'ದಿ ಇಂಡಿಯನ್ ಹೌಸ್’ ಸಿನಿಮಾ ಘೋಷಣೆ
ಮದುವೆಯಾಗಿ 10 ವರ್ಷಗಳ ಬಳಿಕ ಗರ್ಭಧಾರಣೆ: "ನಾನು ತಾಯಿಯಾಗಬೇಕೆಂದು ಬಯಸಿದ ಕ್ಷಣ ಗರ್ಭಿಣಿಯಾಗಿರುವುದು ಬಹಳ ರೋಮಾಂಚನ ಮತ್ತು ಹೆಮ್ಮೆಯ ವಿಷಯ. ಅದೇ ಸಮಾಜ ಬಯಸಿದಾಗ ಗರ್ಭಿಣಿ ಆಗಿದ್ದರೆ ಈ ಸಂತಸ ಸಿಗುತ್ತಿರಲಿಲ್ಲ. ಮದುವೆಯಾಗಿ 10 ವರ್ಷಗಳ ನಂತರ ನಾವು ಮಕ್ಕಳನ್ನು ಹೊಂದಲು ಬಯಸಿದ್ದೇವೆ. ಏಕೆಂದರೆ ಇದು ಸೂಕ್ತ ಸಮಯ. ನಾವಿಬ್ಬರೂ ನಮ್ಮ ಕ್ಷೇತ್ರಗಳಲ್ಲಿ ಬೆಳೆದಿದ್ದೇವೆ. ಆರ್ಥಿಕವಾಗಿ ಸಬಲರಾಗಿದ್ದೇವೆ. ನಮ್ಮ ಮಕ್ಕಳಿಗೆ ಏನು ಬೇಕೋ ಅದೆಲ್ಲವನ್ನೂ ಕೊಡುವ ಮಟ್ಟಕ್ಕೆ ತಲುಪಿದ್ದೇವೆ. ಇದು ನಮ್ಮ ಆಯ್ಕೆ" ಎಂದು ಉಪಾಸನಾ ಈ ಹಿಂದೆ ಹೇಳಿದ್ದರು.
2011ರ ಜೂನ್ 14ರಂದು ರಾಮ್ ಚರಣ್ ಮತ್ತು ಉಪಾಸನಾ ದಾಂಪತ್ಯ ಜೀವನ ಆರಂಭಿಸಿದರು. ಮೊನ್ನೆ ಜೂನ್ 14 ರಂದು ದಂಪತಿ ತಮ್ಮ 11ನೆಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಚೆನ್ನೈನಲ್ಲಿದ್ದ ವೇಳೆ ಇವರಿಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದರು. ಬಳಿಕ ಹಿರಿಯರು ನಿಶ್ಚಯಿಸಿದ ಬಳಿಕ ಈ ಮದುವೆ ನಡೆಯಿತು. ವೈವಾಹಿಕ ಜೀವನದಲ್ಲಿ ಯಶಸ್ವಿ ಪ್ರಯಾಣ ನಡೆಸುತ್ತಿದ್ದಾರೆ.
ರಾಮ್ ಚರಣ್ ಸಿನಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಲ್ಲದೇ ಸಮಾಜ ಸೇವೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಯೂಟ್ಯೂಬ್ ಚಾನಲ್ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇದನ್ನೂ ಓದಿ: ಹೊಸ ಪ್ರತಿಭೆಗಳಿಗೆ ಅವಕಾಶ: 'ವಿ ಮೆಗಾ ಪಿಕ್ಚರ್ಸ್'ಗೆ ಹೆಗಲು ಕೊಟ್ಟ ನಟ ರಾಮ್ ಚರಣ್