ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ 'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ದಸರಾ ಉಡುಗೊರೆಯಾಗಿ ಮೂಡಿಬಂದ ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಎಲ್ಲೆಲ್ಲೂ ಬಾಲಯ್ಯ ಹವಾನೇ ಇದೆ. ಸಾಮಾಜಿಕ ಸಂದೇಶದ ಜೊತೆಗೆ ಸಾಹಸ ಅಂಶಗಳಿರುವ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ಕಾಜಲ್ ತಮ್ಮದೇ ಶೈಲಿಯಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಅದರಲ್ಲೂ ಬಾಲಯ್ಯ ಸಿನಿಮಾದಲ್ಲಿ ತೆಲಂಗಾಣ ಆಡುಭಾಷೆಯಲ್ಲಿ ಮಾತನಾಡಿದ್ದಾರೆ. ಯಾವುದೇ ದೋಷವಿಲ್ಲದೇ, ಸರಾಗವಾಗಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇತ್ತೀಚೆಗೆ 'ಭಗವಂತ ಕೇಸರಿ' ಸಿನಿಮಾದ ಸಕ್ಸಸ್ ಮೀಟ್ ನಡೆಯಿತು. ಇಡೀ ಚಿತ್ರತಂಡ ಪಾಲ್ಗೊಂಡು ಸದ್ದು ಮಾಡಿತು. ಬಾಲಯ್ಯ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡರು. ಶೀಘ್ರದಲ್ಲೇ ಈ ಸಿನಿಮಾ ಹಿಂದಿಗೆ ಡಬ್ ಆಗಲಿದೆ ಎಂದು ತಿಳಿಸಿದರು. ಇದನ್ನು ಕೇಳಿದ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಬಾಲಯ್ಯ ಅವರ ಧ್ವನಿಯನ್ನು ಹಿಂದಿಯಲ್ಲಿ ಕೇಳಲು ಆಸಕ್ತರಾಗಿದ್ದಾರೆ.
"ನನ್ನ ತಂದೆ ಮತ್ತು ನಾನು ಹೊಸ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇವೆ. ಅದಕ್ಕಾಗಿ ನನ್ನ ಪಾತ್ರವನ್ನು ನಾನು ಹಿಂದಿಯಲ್ಲೂ ಡಬ್ ಮಾಡಿದ್ದೇನೆ. ನಾನು ಹಿಂದಿಗೆ ಡಬ್ ಮಾಡುತ್ತಿರುವುದು ಇದೇ ಮೊದಲು. ಈ ಚಿತ್ರದ ಮೂಲಕ ನನ್ನ ಹಿಂದಿ ಭಾಷೆಯ ಹಿಡಿತವನ್ನು ನೀವು ಶೀಘ್ರದಲ್ಲೇ ನೋಡುತ್ತೀರಿ. ಈ ಚಿತ್ರ ತೆಲುಗು ಜನರ ಶಕ್ತಿಯನ್ನು ಸಾಬೀತುಪಡಿಸುತ್ತದೆ" ಎಂದು ಬಾಲಕೃಷ್ಣ ಸಕ್ಸಸ್ ಮೀಟ್ನಲ್ಲಿ ಹೇಳಿದರು.
ಇದನ್ನೂ ಓದಿ: 'ಭಗವಂತ ಕೇಸರಿ' ರಿಲೀಸ್: ಬಾಲಯ್ಯ ನಟನೆಯ ಸಿನಿಮಾ ವಿಮರ್ಶೆ ಇಲ್ಲಿದೆ
ಚಿತ್ರದಲ್ಲಿ ಬಾಲಯ್ಯ ಅವರ ಡೈಲಾಗ್ಸ್, ಆ್ಯಕ್ಷನ್ ಸೀನ್ಸ್, ಎಮೋಷನಲ್ ದೃಶ್ಯಗಳು ಸಿನಿಪ್ರಿಯರ ಮನ ಗೆದ್ದಿವೆ. ಚಿಕ್ಕವಯಸ್ಸಿನಲ್ಲೇ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಿಕೊಡುವ ಸಂದೇಶವನ್ನು ಈ ಸಿನಿಮಾ ಹೊಂದಿದ್ದು, ಫ್ಯಾಮಿಲಿ ಆಡಿಯನ್ಸ್ ಸಿನಿಮಾಗೆ ಕನೆಕ್ಟ್ ಆಗಿದ್ದಾರೆ. ಮುಖ್ಯವಾಗಿ ಬಾಲಯ್ಯ ಮತ್ತು ಶ್ರೀಲೀಲಾ ನಟನೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ತೆರೆ ಮೇಲೆ ಅಪ್ಪ-ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪಾಟಿ ಮತ್ತು ಹರೀಶ್ ಪೆದ್ದಿ ನಿರ್ಮಾಣ ಮಾಡಿದ್ದಾರೆ. ಚಿತ್ರವು ಅಕ್ಟೋಬರ್ 19ರಂದು ತೆರೆ ಕಂಡಿದೆ. ಈಗಲೂ ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾ ಓಡುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಿಸೆಂಬರ್ ವೇಳೆಗೆ ಓಟಿಟಿಯಲ್ಲಿ 'ಭಗವಂತ ಕೇಸರಿ' ಲಭ್ಯ ಆಗಲಿದೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಬಾಲಯ್ಯ ನಟನೆಯ 'ಭಗವಂತ ಕೇಸರಿ'ಗೆ ಭರ್ಜರಿ ಗೆಲುವು; ಮೊದಲ ದಿನದ ಕಲೆಕ್ಷನ್ ಇಷ್ಟಂತೆ!