'ಒಂದು ಮನೆ, ಎರಡು ಪಾತ್ರ'ಗಳನ್ನಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ಗಳನ್ನು ಕಂಪೋಸ್ ಮಾಡುವುದು ಕೂಡಾ ಕಷ್ಟದ ಕೆಲಸವೇ. ಆರಂಭದಿಂದಲೂ ಒಂದಲ್ಲೊಂದು ಕಾರಣಕ್ಕೆ ಕುತೂಹಲ ಮೂಡಿಸುತ್ತಾ ಬಂದಿರುವ ಚಿತ್ರ 'ಅಥಿ ಐ ಲವ್ ಯು'. ರೋಜ್ ಸಿನಿಮಾ ಖ್ಯಾತಿಯ ಶ್ರಾವ್ಯಾ ಬಹಳ ದಿನಗಳ ಬಳಿಕ 'ಅಥಿ ಐ ಲವ್ ಯು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರದ ನಾಯಕ ಲೋಕೇಂದ್ರ ಸೂರ್ಯ ಚಿತ್ರದಲ್ಲಿ ನಟಿಸುವ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ.
ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಶೀರ್ಷಿಕೆಯ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ವಾತಾವರಣದಲ್ಲಿ ಅಚ್ಚರಿ ಮೂಡಿಸಿದವರು ಲೋಕೇಂದ್ರ ಸೂರ್ಯ. ಆ ತನಕ ಯಾವ ಚಿತ್ರಗಳಲ್ಲೂ ನಟಿಸದ, ತಮಗೆ ಪರಿಚಿತರಿರುವವರನ್ನೇ ಪಾತ್ರಗಳನ್ನಾಗಿಸಿ, ಸಿನಿಮಾದ ಅನುಭವವೇ ಇರದವರನ್ನು ತಂತ್ರಜ್ಞರನ್ನಾಗಿಸಿ, ಕಾಡುವ ಕಥೆಯ, ಚೆಂದದ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೇಂದ್ರ ಅವರೇ ರೂಪಿಸಿರುವ 'ಕುಗ್ರಾಮ' ಚಿತ್ರ ಕೂಡ ಬಿಡುಗಡೆಗೆ ತಯಾರಾಗಿದೆ. ಸದ್ಯ 'ಅಥಿ ಐ ಲವ್ ಯು' ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ.
ರೊಮ್ಯಾಂಟಿಕ್ ಫೋಟೋಶೂಟ್: ಇದೀಗ ಸೂರ್ಯ ಸಿನಿ ಫ್ಯಾಕ್ಟರಿಯಲ್ಲಿ ಈ ಅಥಿ ಐ ಲವ್ ಯು ಚಿತ್ರಕ್ಕಾಗಿ ಕ್ಯೂಟ್ ಆ್ಯಂಡ್ ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ಈ ಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಚಿತ್ರಗಳು ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣ ಬಹುತೇಕ ಮುಕ್ತಾಯವಾಗುವ ಈ ಹಂತದಲ್ಲಿ ಫೋಟೋಶೂಟ್ ಮಾಡಿದ್ದೇವೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಅಂದ್ರೆ ಸಾತ್ವಿಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಮೇ. 13ರ ನಂತರ ಅಥಿ ಐ ಲವ್ ಯು ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆ ಎಂದು ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಹೇಳಿದ್ದಾರೆ. ನಟಿಯಾಗಿ ಹೆಸರು ಮಾಡಿರುವ ಋತುಚೈತ್ರ ಅವರು ವಸ್ತ್ರವಿನ್ಯಾಸ ಮಾಡಿರುವುದು ಫೋಟೋಶೂಟ್ನ ಮತ್ತೊಂದು ವಿಶೇಷ.
ಇದನ್ನೂ ಓದಿ: ಮೆಟ್ ಗಾಲಾ 2023: ರೆಡ್ ಕಾರ್ಪೆಟ್ ಮೇಲೆ ಪ್ರಿಯಾಂಕಾ, ಆಲಿಯಾ, ಇಶಾ ಅಂಬಾನಿ ಝಲಕ್!
ಇನ್ನುಳಿದಂತೆ, ಸೆವೆನ್ ರಾಜ್ ಆರ್ಟ್ಸ್ ನಿರ್ಮಿಸುತ್ತಿರುವ 'ಅಥಿ ಐ ಲವ್ ಯು' ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ. ಶೀಘ್ರವೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸುತ್ತಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 'ದಿ ಕೇರಳ ಸ್ಟೋರಿ'ಯಲ್ಲಿನ ಆರೋಪ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ: ಎಂವೈಎಲ್ ಮುಖಂಡ ಫಿರೋಜ್