ಅನಂತ್ ನಾಗ್.....ಕನ್ನಡ ಚಿತ್ರರಂಗದ ಮೇರು ನಟ. ಅದ್ಭುತ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡ ತಾರೆ. ಪ್ರತಿಭಾನ್ವಿತ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 50 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ಸಿನಿ ತಾರೆಯರೂ ಸೇರಿದಂತೆ ಅಭಿಮಾನಿಗಳು ನಟನಿಗೆ ಅಭಿನಂದನೆ ತಿಳಿಸಿದ್ದಾರೆ.
280ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ... 1973ರಲ್ಲಿ ತೆರೆಕಂಡ 'ಸಂಕಲ್ಪ' ಅನಂತ್ ನಾಗ್ ಬಣ್ಣ ಹಚ್ಚಿದ ಚೊಚ್ಚಲ ಚಿತ್ರ. 1973ರಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟ ಕನ್ನಡ ಮಾತ್ರವಲ್ಲದೇ, ಹಿಂದಿ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈವರೆಗೆ ಅಂದ್ರೆ 50 ವರ್ಷಗಳ ಸಿನಿ ಬದುಕಿನಲ್ಲಿ ಸರಿ ಸುಮಾರು 280ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.
ಸಿನಿ ಪಯಣಕ್ಕೆ 50ರ ಸಂಭ್ರಮ... ಎವರ್ ಗ್ರೀನ್ ಹೀರೋ ಎಂದೇ ಕರೆಸಿಕೊಳ್ಳುವ ಹಿರಿಯ ನಟ ಅನಂತ್ ನಾಗ್ ಅವರ ಸಿನಿ ಪಯಣಕ್ಕೆ 50ರ ಸಂಭ್ರಮ. ಸ್ಯಾಂಡಲ್ವುಡ್ನಲ್ಲಿ ಅವರ ಸೇವೆ ಅಪಾರ. ಈ ಹಿರಿವಯಸ್ಸಿನಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ನಟನಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಅನಂತ್ ನಾಗ್ ಕುರಿತ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನಂತ್ ನಾಗ್ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಾಂತಾರ ಸಾರಥಿ ರಿಷಬ್ ಶೆಟ್ಟಿ, ''ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ'' ಎಂದು ಬರೆದುಕೊಂಡಿದ್ದಾರೆ.
ಇನ್ನೂ ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅನಂತ್ ನಾಗ್ ಮತ್ತು ಶಿವಣ್ಣ ಇರುವ ಭಾವಚಿತ್ರದಲ್ಲಿ ''ಚಿತ್ರರಂಗದಲ್ಲಿ 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅನಂತ್ ನಾಗ್ ಸರ್, ನಿಮಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ ಮತ್ತು ವರ್ಚಸ್ಸು ತಲೆಮಾರುಗಳವರೆಗೆ ಪ್ರೇರಣೆ'' ಎಂದು ಬರೆದುಕೊಂಡಿದ್ದಾರೆ.
ಬಾಲ್ಯ ಜೀವನ: 1948 ರ ಸೆ. 4ರಂದು ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಕೊಂಕಣಿ ಕುಟುಂಬದಲ್ಲಿ ಜನಿಸಿದರು. ಸದಾನಂದ್ ನಾಗರಕಟ್ಟೆ ಹಾಗೂ ಆನಂದಿ ನಾಗರಕಟ್ಟೆ ದಂಪತಿ ಪುತ್ರ. ಇವರ ಮೂಲ ನಾಮ ಅನಂತ್ ನಾಗರಕಟ್ಟೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಶಂಕರ್ ನಾಗ್ ಇವರ ಪ್ರೀತಿಯ ಸಹೋದರ. ವಿದ್ಯಾಭ್ಯಾಸದ ವೇಳೆಯೇ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಿನಿ ಪಯಣ... 1973ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು . ಹಂಸಗೀತೆ, ಬಯಲುದಾರಿ, ಚಂದನದ ಗೊಂಬೆ, ಮಿಂಚಿನ ಓಟ, ನಾ ನಿನ್ನ ಬಿಡಲಾರೆ, ನಾರದ ವಿಜಯ, ಅನುಪಮ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಮನೆಯೇ ಮಂತ್ರಾಲಯ, ಮುದುಡಿದ ತಾವರೆ ಅರಳಿತು, ಗಣೇಶ ಸುಬ್ರಹ್ಮಣ್ಯ, ನಿಷ್ಕರ್ಷ, ಬೆಳದಿಂಗಳ ಬಾಲೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕವಲು ದಾರಿ ಸೇರಿದಂತೆ 280 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸೀರಿಯಲ್ಗಳಲ್ಲೂ ಕಾಣಿಸಿಕೊಂಡಿದ್ದರು. ಮಾಲ್ಗುಡಿ ಡೇಸ್, ಪ್ರೀತಿ ಇಲ್ಲದ ಮೇಲೆ, ಚಿಟ್ಟೆ ಹೆಜ್ಜೆ, ಗರ್ವ, ಲಾಟರಿ, ನಿತ್ಯೋತ್ಸವದಂತ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಅನಂತ್ನಾಗ್ 1994ರಲ್ಲಿ ಬಿಡಿಎ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Sreeleela: ಬಹುಬೇಡಿಕೆ ನಟಿ ಶ್ರೀಲೀಲಾ ಕೈಯಲ್ಲಿ 10 ಸಿನಿಮಾಗಳು.. ಮುಂದಿನ 6 ತಿಂಗಳಲ್ಲಿ ತೆರೆಕಾಣಲಿವೆ 5 ಚಿತ್ರಗಳು!
ವೈಯಕ್ತಿಕ ಬದುಕು: 1987 ರಲ್ಲಿ ಸಹನಟಿ ಗಾಯತ್ರಿ ಅವರ ಜೊತೆ ಅನಂತ್ ನಾಗ್ ಹಸೆಮಣೆ ಏರಿದರು. ಈ ಮಾದರಿ ದಂಪತಿಗೆ ಅದಿತಿ ಎಂಬ ಪುತ್ರಿ ಇದ್ದಾರೆ.