ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟ ಧರ್ಮ ಕೀರ್ತಿರಾಜ್. ಪ್ರಸ್ತುತ 'ರೋನಿ' ಸಿನಿಮಾದ ಜಪ ಮಾಡುತ್ತಿರುವ ಧರ್ಮ ಕೀರ್ತಿರಾಜ್ 'ಅಮರಾವತಿ ಪೊಲೀಸ್ ಸ್ಟೇಷನ್' ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಸಿನಿಮಾದ ಮುಹೂರ್ತ ಸಮಾರಂಭ ಸಂಪನ್ನ: ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ "ಅಮರಾವತಿ ಪೊಲೀಸ್ ಸ್ಟೇಷನ್" ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮುಹೂರ್ತ ದೃಶ್ಯಕ್ಕೆ ಡಾ.ವಿ. ನಾಗೇಂದ್ರ ಪ್ರಸಾದ್ ಅವರು ಕ್ಲಾಪ್ ಮಾಡಿದರೆ, ನಿರ್ಮಾಪಕರಾದ ಅಂಜನ ರೆಡ್ಡಿ ಹಾಗೂ ಗೀತಾ ಅಂಜನರೆಡ್ಡಿ ಕ್ಯಾಮರಾಗೆ ಚಾಲನೆ ನೀಡಿದರು.
ಪುನೀತ್ ಅರಸೀಕೆರೆ ಅವರ ಎರಡನೇ ಚಿತ್ರ.... ಸಿನಿಮಾ ಕುರಿತು ನಿರ್ದೇಶಕ ಪುನೀತ್ ಅರಸೀಕೆರೆ ಮಾತನಾಡಿ, ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡುವ ವೇಳೆ ದಲ್ಲಾಳಿಗಳಿಂದ ಎದುರಿಸುವ ಸಮಸ್ಯೆಗಳಿಗೆ ಊರಗೌಡ ಪರಿಹಾರ ಹುಡುಕುತ್ತಾನೆ. ಆತ ಇದ್ದಕ್ಕಿದ್ದ ಹಾಗೆ ಕಾಣೆಯಾದಾಗ ಆತನನ್ನು ಪತ್ತೆಹಚ್ಚಲು ಬಂದ ಪೊಲೀಸ್ ಅಧಿಕಾರಿ ಕೂಡ ಕಣ್ಮರೆಯಾಗುತ್ತಾನೆ. ಇದಕ್ಕೆಲ್ಲ ಪರಿಹಾರ ಕಂಡುಹಿಡಿಯುವುದೇ ಚಿತ್ರದ ಕಥೆ. ಸ್ನೇಹಿತನನ್ನು ಹುಡುಕಿಕೊಂಡು ಹಳ್ಳಿಗೆ ಬರುವ ನಾಯಕ ಹೇಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂಬುದನ್ನು ಸಸ್ಪೆನ್ಸ್, ಥ್ರಿಲ್ಲರ್ ಕಥೆಯೊಂದಿಗೆ ಹೇಳುವ ಪ್ರಯತ್ನವಿದು. ಈಗಾಗಲೇ ಡಬಲ್ ಬೋರ್ಡ್ ಎಂಬ ಚಿತ್ರವನ್ನು ನಿರ್ದೇಶಿರುವ ಪುನೀತ್ ಅರಸೀಕೆರೆ ಅವರ ಎರಡನೇ ಚಿತ್ರವಿದು.
ಧರ್ಮ ಕೀರ್ತಿರಾಜ್ ಜೋಡಿಯಾಗಿ ವೇದ್ವಿಕಾ ಅಭಿನಯಿಸುತ್ತಿದ್ದಾರೆ. ಜೊತೆಗೆ ಹಿರಿಯ ನಟಿ ಭವ್ಯ, ಉಮಾಶ್ರೀ, ಸಾಧುಕೋಕಿಲ, ಚಿಕ್ಕಣ್ಣ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಸೇರಿದಂತೆ ಪ್ರಮುಖರು ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ, ವಿ. ರಮೇಶ್ ಬಾಬು ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ವಿಕ್ರಂ ಮೋರ್ ಅವರ ಸಾಹಸ ನಿರ್ದೇಶನ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಕಾಂತಾರಕ್ಕೆ ವರ್ಷದ ಸಂಭ್ರಮ: ಕಾಂತಾರ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ ಪ್ರೀಕ್ವೆಲ್ ಅಪ್ಡೇಟ್ಸ್ ಇಲ್ಲಿದೆ
ಎಸ್.ಎ.ಆರ್. ಪ್ರೊಡಕ್ಷನ್ಸ್ ಲಾಛನದಲ್ಲಿ ಅಂಜನರೆಡ್ಡಿ ಹಾಗೂ ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ನಿರ್ಮಿಸುತ್ತಿರುವ ಚಿತ್ರವನ್ನು, ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಕ್ಟೋಬರ್ 9ರಿಂದ ಶೂಟಿಂಗ್ ಆರಂಭ ಆಗಲಿದೆ. ಅರಸೀಕೆರೆಯ ಪೊಲೀಸ್ ಸ್ಟೇಷನ್, ಸರ್ಕಾರಿ ಆಸ್ಪತ್ರೆಯಲ್ಲಿ ಶೂಟಿಂಗ್ ನಡೆಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ನಂತರ ಬೆಂಗಳೂರಿನಲ್ಲಿ 45 ರಿಂದ 50 ದಿನಗಳ ಕಾಲ ಶೂಟಿಂಗ್ ನಡೆಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: 'ಯುವ' ಬಿಡುಗಡೆಯಾಗಬೇಕಿದ್ದ ದಿನ 'ಸಲಾರ್' ರಿಲೀಸ್... ಹೊಂಬಾಳೆ ಫಿಲ್ಮ್ಸ್ ವಿರುದ್ಧ ಬೇಸರಿಸಿಕೊಂಡರಾ ಸಿನಿಪ್ರಿಯರು?!