ಬಾಲಿವುಡ್ ನಟಿ ಆಲಿಯಾ ಭಟ್ ಗುರುವಾರ, ಮುಂಬೈನಲ್ಲಿ ತಮ್ಮ ಸಹೋದರಿ ಶಾಹೀನ್ ಭಟ್ ಹಾಗೂ ತಾಯಿ ಸೋನಿ ರಜ್ದಾನ್ ಅವರೊಂದಿಗೆ ರಾತ್ರಿ ಊಟಕ್ಕೆಂದು ಹೊರಗಡೆ ತೆರಳಿದ್ದರು. ಈ ಮೂವರು ರೆಸ್ಟೋರೆಂಟ್ನಿಂದ ಹೊರಗಡೆ ಬರುತ್ತಿರುವಾಗ ಅವರ ಫೋಟೋ ತೆಗೆಯಲು ಪಾಪರಾಜಿಗಳು ಹರಸಾಹಸಪಟ್ಟರು. ಈ ವೇಳೆ, ಅವರಲ್ಲಿ ಒಬ್ಬರು ತಮ್ಮ ಚಪ್ಪಲಿಯನ್ನು ಕಳೆದುಕೊಂಡರು. ಇದನ್ನು ಕಂಡ ಆಲಿಯಾ ಚಪ್ಪಲಿ ಹುಡುಕಲು ಸಹಾಯ ಮಾಡಿದ್ದಲ್ಲದೇ, ತಮ್ಮ ಕೈಯಿಂದಲೇ ಚಪ್ಪಲಿಯನ್ನು ಎತ್ತಿ ಆ ವ್ಯಕ್ತಿಗೆ ನೀಡಿದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿಗಳು ಹಂಚಿಕೊಂಡ ವಿಡಿಯೋದಲ್ಲಿ, ಆಲಿಯಾ ರೆಸ್ಟೋರೆಂಟ್ನಿಂದ ಶಾಹೀನ್ ಹಾಗೂ ಸೋನಿಯೊಂದಿಗೆ ತಮ್ಮ ಕಾರಿನತ್ತ ಧಾವಿಸುತ್ತಿರುವುದನ್ನು ಕಾಣಬಹುದು. ಕೆಲ ಪಾಪ್ಗಳು ಅವರ ಫೋಟೋ ತೆಗೆಯಲು ಧಾವಿಸಿದಾಗ, ಅದರಲ್ಲಿ ಒಬ್ಬರು ತಮ್ಮ ಚಪ್ಪಲಿಯನ್ನು ಕಳೆದುಕೊಂಡರು. ಇದನ್ನು ಕಂಡ ಆಲಿಯಾ ಚಪ್ಪಲಿಯನ್ನು ಹುಡುಕಿ ಪಾಪ್ಗೆ ನೀಡಿದರು. ಫೋಟೋಗ್ರಾಫರ್ ಆಲಿಯಾಗೆ ಧನ್ಯವಾದ ಹೇಳುತ್ತಿದ್ದಂತೆ, ಅವರು ಕಾರಿನೊಳಗೆ ಕುಳಿತು ಪಾಪರಾಜಿಗಳಿಗೆ ವಿದಾಯ ಹೇಳಿದರು.
ಈ ವಿಡಿಯೋ ಅನೇಕ ಜನರ ಹೃದಯವನ್ನು ಗೆದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್ ಮೂಲಕ ಆಲಿಯಾ ಮೇಲೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. "ಅವರು ತುಂಬಾ ಸುಂದರವಾಗಿದ್ದಾರೆ. ಬೇರೆ ಯಾವುದೇ ನಟಿ ಅವರ ಸ್ಥಾನದಲ್ಲಿದ್ದಿದ್ದರೆ, ಈ ಥರ ಮಾಡಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಆಲಿಯಾ ನನ್ನ ಮೆಚ್ಚಿನ ನಟಿ " ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: 'ಕೋಟ್ಯಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ': ಚಂದ್ರಯಾನ 3ಗೆ ಶುಭಹಾರೈಸಿದ ಬಾಲಿವುಡ್ ಸೆಲೆಬ್ರಿಟಿಗಳು
ಆಲಿಯಾ ಭಟ್ ಮತ್ತು ಪಾಪರಾಜಿಗಳ ಸಂಬಂಧ ಮೊದಲಿನಿಂದಲೂ ಉತ್ತಮವಾಗಿದೆ. ಈ ಹಿಂದೆ ಆಲಿಯಾ ಮತ್ತು ಅವರ ಪತಿ, ನಟ ರಣ್ಬೀರ್ ಕಪೂರ್ ತಮ್ಮ ಮಗಳು ರಾಹಾಳ ಗೌಪ್ಯತೆ ಕಾಪಾಡಲು ನಿರ್ಧರಿಸಿದಾಗ, ಅವರು ಮುಂಬೈನ ಎಲ್ಲಾ ಫೋಟೋಗ್ರಾಫರ್ಗಳನ್ನು ತಮ್ಮ ಮನೆಗೆ ಕರೆಸಿದ್ದರು. ರಾಹಾಳ ಫೋಟೋ ತೆಗೆಯದಂತೆ ಅವರೊಂದಿಗೆ ಚರ್ಚಿಸಿದ್ದರು.
ಇನ್ನೂ ಆಲಿಯಾ ಭಟ್ ಸಿನಿಮಾ ವಿಚಾರವಾಗಿ ನೋಡುವುದಾದರೆ, ರಣ್ವೀರ್ ಸಿಂಗ್ ಜೊತೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಿನಿಮಾದ ಟ್ರೇಲರ್ ಜುಲೈ 4 ರಂದು ಬಿಡುಗಡೆಯಾಯಿತು. ರಣ್ವೀರ್, ಆಲಿಯಾ ಹೊರತಾಗಿ, ಹಿರಿಯ ಕಲಾವಿದರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರು ಈ ಚಲನಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹು ತಾರಾಗಣ ಹೊಂದಿರುವ ಬಿಗ್ ಬಜೆಟ್ ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ.
ಇನ್ನು ಚಿತ್ರ ನಿರ್ದೇಶಕ ಕರಣ್ ಜೋಹರ್ ಅವರು ಕಥೆ ಹೇಳುವ ಶೈಲಿ, ಬಿಗ್ ಸ್ಟಾರ್ ಕಾಸ್ಟ್, ಅದ್ಧೂರಿ ಸೆಟ್, ಭಾವಪೂರ್ಣ ಸಂಗೀತದೊಂದಿಗೆ ಬರಲಿರುವ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾದಂತೆ ತೋರುತ್ತಿದೆ. ಸದ್ಯ ಅನಾವರಣಗೊಂಡಿರುವ ಟ್ರೇಲರ್, ಟೀಸರ್, 2 ಹಾಡುಗಳಲ್ಲಿ ಚಿತ್ರದ ಪ್ರಮುಖ ನಟರಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿಯ ಜಗಳ, ಪ್ರೇಮ, ಹಬ್ಬದ ವಾತಾವರಣ ಮತ್ತು ಮದುವೆಯ ಸಮಯದಲ್ಲಿ ಕುಟುಂಬದ ಆಚರಣೆಗಳುಳ್ಳ ಹಲವಾರು ದೃಶ್ಯಗಳಿವೆ. ಕರಣ್ ಜೋಹರ್ 6 ವರ್ಷಗಳ ಬಳಿಕ ಸಿನಿಮಾವೊಂದನ್ನು ನಿರ್ದೇಶಿಸಿದ್ದು, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಇದನ್ನೂ ಓದಿ: ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡ 'ಉಸಿರೇ ಉಸಿರೇ' ಟೀಸರ್... ಅದೃಷ್ಟ ಪರೀಕ್ಷೆಗಿಳಿದ ರಾಜೀವ್