ಸಿನಿಮಾ ಎಂಬ ಗ್ಲ್ಯಾಮರ್ ಲೋಕಕ್ಕೆ ದಿನೇ ದಿನೇ ಹೊಸ ಟ್ಯಾಲೆಂಟ್ ಇರುವ ಪ್ರತಿಭೆಗಳ ಆಗಮನ ಆಗುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಗನ್ಸ್ ಅಂಡ್ ರೋಸಸ್' ಎಂಬ ಚಿತ್ರದ ಮೂಲಕ ನಾಯಕನಾಗಿ ಅರ್ಜುನ್ ಚಿತ್ರರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು.
ಈ ವೇಳೆ ಮೊದಲು ಮಾತು ಶುರು ಮಾಡಿದ ಅಜಯ್ ಕುಮಾರ್, "ನಾನು ಚಿತ್ರರಂಗದಲ್ಲಿ ಕಥೆಗಾರನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಈಗ 'ಗನ್ಸ್ ಅಂಡ್ ರೋಸಸ್' ಎಂಬ ಚಿತ್ರದ ಮೂಲಕ ನನ್ನ ಮಗ ನಾಯಕನಾಗುತ್ತಿದ್ದಾನೆ. ಸಾಕಷ್ಟು ವರ್ಷಗಳಿಂದ ನನಗೆ ತಾವೆಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನನ್ನ ಮಗನಿಗೂ ನಿಮ್ಮೆಲ್ಲರ ಬೆಂಬಲವಿರಲಿ" ಎಂದು ಪ್ರೇಕ್ಷಕರಲ್ಲಿ ಕೇಳಿಕೊಂಡರು.
ಬಳಿಕ ಈ ಚಿತ್ರದ ನಿರ್ದೇಶಕ ಶ್ರೀನಿವಾಸ್ ಕುಮಾರ್ ಮಾತನಾಡಿ, "ನಾನು ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದಗಳು. ಈ ಚಿತ್ರದ ಮೂಲಕ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅರ್ಜುನ್ಗೆ ಮೊದಲ ಚಿತ್ರ. ಖಂಡಿತವಾಗಿಯೂ ಪ್ರೇಕ್ಷಕರಿಗೆ ಅವರು ಇಷ್ಟ ಆಗ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಸಪ್ಲೈಯರ್ ಶಂಕರ' ಮೊದಲ ಹಾಡು ಬಿಡುಗಡೆ: ತಾಯಿ ಕಳೆದುಕೊಂಡ ಮಗನ ನೋವಿನ ಗೀತೆಯಿದು..
ಇನ್ನು ಯುವ ನಟ ಅರ್ಜುನ್ ಮಾತನಾಡಿ, "ಇದು ನನ್ನ ಚೊಚ್ಚಲ ಸಿನಿಮಾ. ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ಕಥೆ ಹಾಗೂ ನನ್ನ ಪಾತ್ರ ಚೆನ್ನಾಗಿದೆ" ಎಂದರು. ಅರ್ಜುನ್ಗೆ ಜೋಡಿಯಾಗಿ ಯಶ್ವಿಕ ನಿಷ್ಕಲ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ನಟರಾದ ಜೀವನ್ ರಿಚಿ ಹಾಗೂ ಹರೀಶ್ ಅಭಿನಯಿಸುತ್ತಿದ್ದಾರೆ. ಬಳಿಕ ಈ ಚಿತ್ರದ ನಿರ್ಮಾಪಕ ಹೆಚ್.ಆರ್ ನಟರಾಜ್ ಮಾತನಾಡಿ, "ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಬಿಲ್ಡರ್ ಕೂಡ. ನಿರ್ದೇಶಕ ಶ್ರೀನಿವಾಸಮೂರ್ತಿ ನನ್ನ ಸ್ನೇಹಿತರು. ಅವರು ಈ ಚಿತ್ರದ ಬಗ್ಗೆ ನನ್ನ ಬಗ್ಗೆ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ" ಎಂದು ತಿಳಿಸಿದರು.
'ಗನ್ಸ್ ಅಂಡ್ ರೋಸಸ್' ಚಿತ್ರದಲ್ಲಿ ಅಂಡರ್ ವಲ್ಡ್ ಹಾಗೂ ಪ್ರೇಮಕಥೆ ಎರಡು ಇರುತ್ತದೆ. ಶರತ್ ಎಂಬುವರು ಈ ಚಿತ್ರದ ಕಥೆ ಹಾಗೂ ಸಂಭಾಷಣೆಯನ್ನ ಬರೆದಿದ್ದು ಶಶಿಕುಮಾರ್ ಸಂಗೀತ ನೀಡುತ್ತಿದ್ದಾರೆ. ಜನಾರ್ಧನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶರತ್ ಬರೆದಿದ್ದಾರೆ. ಸದ್ಯ ಇಂದಿನಿಂದ ಗನ್ಸ್ ಅಂಡ್ ರೋಸಸ್ ಚಿತ್ರದಲ್ಲಿ ಅರ್ಜುನ್ ಹೇಗೆ ಕಾಣ್ತಾರೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲೆ ಗೊತ್ತಾಗಲಿದೆ.
ಇದನ್ನೂ ಓದಿ: ರಂಗಾಯಣ ರಘು ನಟನೆಯ 'ಶಾಖಾಹಾರಿ' ಚಿತ್ರಕ್ಕೆ ವಿಕಟಕವಿ ಯೋಗರಾಜ್ ಭಟ್ ಸಾಥ್