ಭಾರತೀಯ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಅಜಯ್ ದೇವ್ಗನ್, ಜ್ಯೋತಿಕಾ ಮತ್ತು ಆರ್.ಮಾಧವನ್ ನಟನೆಯ ಸಿನಿಮಾ ಶೀರ್ಷಿಕೆ ಅನಾವರಣಗೊಂಡಿದೆ. ಬಹುನಿರೀಕ್ಷಿತ ಚಿತ್ರಕ್ಕೆ 'ಶೈತಾನ್' (Shaitaan) ಎಂದು ಹೆಸರಿಡಲಾಗಿದೆ. ಚಿತ್ರ ನಿರ್ಮಾಪಕರು ಚಿತ್ರದ ಟೈಟಲ್ ಪೋಸ್ಟರ್ ಅನಾವರಣಗೊಳಿಸಿ, ಸಿನಿಮಾ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ.
'ಶೈತಾನ್' ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್ ಬಣ್ಣ ಹಚ್ಚುವ ಜೊತೆಗೆ ಸಹ-ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಶೈತಾನ್ ಮೂಲಕ ಎರಡು ದಶಕಗಳ ಬ್ರೇಕ್ ಬಳಿಕ ಜ್ಯೋತಿಕಾ ಹಿಂದಿ ಚಿತ್ರಕ್ಕೆ ಮರಳಿದ್ದಾರೆ. ಆರ್.ಮಾಧವನ್ ಕೂಡ ಅಭಿನಯಿಸಿರೋ ಹಿನ್ನೆಲೆಯಲ್ಲಿ 'ಶೈತಾನ್' 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಅಜಯ್ ದೇವ್ಗನ್ ಆಕರ್ಷಕ ಟೈಟಲ್ ಪೋಸ್ಟರ್ ಶೇರ್ ಮಾಡಿದ್ದಾರೆ. ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿರುವ ಅಜಯ್ ಇನ್ಸ್ಟಾಗ್ರಾಮ್ನಲ್ಲಿ, "ನಿಮಗಾಗಿ ಶೈತಾನ್ ಬರುತ್ತಿದೆ. 2024ರ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ" ಎಂದು ಬರೆದುಕೊಂಡಿದ್ದಾರೆ.
ಚಿತ್ರಕ್ಕೆ ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗುಜರಾತಿ ನಟ ಜಾಂಕಿ ಬೋಡಿವಾಲಾ ಅವರ ಹಿಂದಿ ಭಾಷೆಯ ಚೊಚ್ಚಲ ಚಿತ್ರವಿದು. ಜಿಯೋ ಸ್ಟುಡಿಯೋಸ್, ಅಜಯ್ ದೇವಗನ್ ಫಿಲ್ಮ್ಸ್ ಮತ್ತು ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಶನಲ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ನಿರ್ಮಿಸಿದ್ದಾರೆ. 2023ರ ಜೂನ್ನಲ್ಲಿ ಸಿನಿಮಾ ಸೆಟ್ಟೇರಿತ್ತು. ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಿನಿಮಾದ ಹೆಚ್ಚಿನ ಶೂಟಿಂಗ್ ಮುಂಬೈ, ಮಸ್ಸೂರಿ ಮತ್ತು ಲಂಡನ್‌ನಲ್ಲಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಾಮಿಡಿ ಕಿಲಾಡಿ ಖ್ಯಾತಿಯ ಸೀರುಂಡೆ ರಘು ಈಗ 'ರಣಾಕ್ಷ' ಹೀರೋ
'ಶೈತಾನ್' ಬ್ಲ್ಯಾಕ್ ಮ್ಯಾಜಿಕ್ ಪ್ರಪಂಚವನ್ನು ಪರಿಶೀಲಿಸಲಿದೆ. ಕ್ವೀನ್, ಸೂಪರ್ 30, ಮತ್ತು ಗುಡ್ ಬೈನಂತಹ ಚಿತ್ರಗಳಿಗೆ ಹೆಸರುವಾಸಿಯಾಗಿರುವ ವಿಕಾಸ್ ಬಹ್ಲ್ ಅವರೊಂದಿಗೆ ಅಜಯ್ ದೇವ್ಗನ್ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ರಾಮನ ಕುರಿತು ಸಂಭಾಷಣೆ ವಿವಾದ: ಕ್ಷಮೆಯಾಚಿಸಿದ ನಯನತಾರಾ
ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಜಯ್ ದೇವ್ಗನ್ ಇತ್ತೀಚೆಗೆ ತಮಿಳು ಬ್ಲಾಕ್‌ಬಸ್ಟರ್ ಕೈಥಿ ಸಿನಿಮಾದ ಹಿಂದಿ ರೂಪಾಂತರ 'ಭೋಲಾ'ದಲ್ಲಿ ಕಾಣಿಸಿಕೊಂಡಿದ್ದರು. 54ರ ಹರೆಯದ ನಟ, ಅಭಿಷೇಕ್ ಕಪೂರ್ ಅವರ ಮುಂಬರುವ ಆ್ಯಕ್ಷನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ನಟನ ಸೋದರಳಿಯ ಅಮನ್ ದೇವ್ಗನ್ ಮತ್ತು ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ ಅವರ ಚೊಚ್ಚಲ ಚಿತ್ರವೂ ಹೌದು. ಅಲ್ಲದೇ, ರೋಹಿತ್ ಶೆಟ್ಟಿಯವರ ಸಿಂಗಮ್ ಎಗೈನ್ ಮತ್ತು ನೀರಜ್ ಪಾಂಡೆ ಅವರ ಔರಾನ್ ಮೇ ಕಹಾ ದಮ್ ಥಾ ಸೇರಿದಂತೆ ಕೆಲ ಪ್ರಾಜೆಕ್ಟ್ಗಳನ್ನು ಹೊಂದಿದ್ದಾರೆ. ಮುಂತಾದ ಯೋಜನೆಗಳಿಗೆ ಸಜ್ಜಾಗುತ್ತಿದ್ದಾರೆ. ಮೈದಾನ್ ಮತ್ತು ರೈಡ್ 2 ಕೂಡ ಈ ಪಟ್ಟಿಯಲ್ಲಿದೆ.