ಮುಂಬೈ (ಮಹಾರಾಷ್ಟ್ರ): ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕ್ರಮ ಚುರುಕುಗೊಂಡಿದೆ. ಈ ಪ್ರಕರಣದ ಆರೋಪಿ ಹಾಗೂ ತುನಿಶಾ ಅವರ ಮಾಜಿ ಪ್ರಿಯಕರ, ಕಿರುತೆರೆ ಸಹನಟ ಶೀಜಾನ್ ಖಾನ್ ಪೊಲೀಸ್ ವಶದಲ್ಲಿದ್ದಾರೆ. ಶೀಜಾನ್ ಖಾನ್ ಅವರ ಪೊಲೀಸ್ ಕಸ್ಟಡಿ ಡಿಸೆಂಬರ್ 30ಕ್ಕೆ ಅಂದರೆ ಇಂದು ಕೊನೆಗೊಳ್ಳುವ ಹಿನ್ನೆಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತುನಿಶಾ ಶರ್ಮಾ ಆತ್ಮಹತ್ಯೆ: ಅತಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ತುನಿಶಾ ಶರ್ಮಾ ಡಿಸೆಂಬರ್ 24ರಂದು ಆತ್ಮಹತ್ಯೆಗೆ ಶರಣಾದರು. ಅಲಿಬಾಬಾ - ದಸ್ತಾನ್ - ಎ - ಕಾಬೂಲ್ ಎಂಬ ಟಿವಿ ಶೋ ಶೂಟಿಂಗ್ ಸೆಟ್‌ನಲ್ಲಿ ತುನಿಶಾ ಶವವಾಗಿ ಪತ್ತೆಯಾಗಿದ್ದರು. ಸಹನಟರಾದ ಶೀಜಾನ್ ಖಾನ್ನೊಂದಿಗೆ ಸ್ನೇಹ ಮತ್ತು ಪ್ರೀತಿ ಹೊಂದಿದ್ದ ತುನಿಶಾ ಆತ್ಮಹತ್ಯೆಗೆ 15 ದಿನಗಳ ಮುನ್ನವಷ್ಟೇ ಬೇರ್ಪಟ್ಟಿದ್ದರು.
ನ್ಯಾಯಾಲಯಕ್ಕೆ ಶೀಜಾನ್ ಖಾನ್ ಹಾಜರು: ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇರೆಗೆ ನಟ ಶೀಜಾನ್ ಖಾನ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಈ ಮೊದಲು ನಾಲ್ಕು ದಿನಗಳ ಕಾಲ ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಡಿಸೆಂಬರ್ 28ಕ್ಕೆ ಪೊಲೀಸ್ ಕಸ್ಟಡಿ ಕೊನೆಗೊಂಡಿದ್ದರಿಂದ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ, ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯ ಅವಧಿಯನ್ನು ಇಲ್ಲಿನ ವಸಾಯ್ ನ್ಯಾಯಾಲಯ ವಿಸ್ತರಿಸಿ ಆದೇಶಿಸಿತ್ತು. ಇಂದು ಆರೋಪಿಯನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವನಿತಾ ಶರ್ಮಾ ಹೇಳಿದ್ದೇನು? ದಿವಂಗತ ನಟಿ ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಮತ್ತು ಸಂಬಂಧಿ ಪವನ್ ಶರ್ಮಾ ಅವರು ಇಂದು ಶೀಜಾನ್ ಖಾನ್ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
- ತುನಿಶಾ ಶೀಜಾನ್‌ಗೆ 25 ಸಾವಿರ ರೂಪಾಯಿ ಉಡುಗೊರೆ ನೀಡುತ್ತಿದ್ದಳು.
- ನನ್ನ ಮಗಳು ತುನಿಶಾಗೆ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹೇರಲಾಗಿತ್ತು.
- ಶೀಜಾನ್ ನನ್ನ ಮಗಳಿಗೆ ಉರ್ದು ಕಲಿಸುತ್ತಿದ್ದ.
- ಶೀಜಾನ್ ಡ್ರಗ್ಸ್ ಸೇವನೆ ಮಾಡುತ್ತಿದ್ದ.
- ನನ್ನ ಮಗಳು ಶೀಜಾನ್ನಿಂದ ಬೇರ್ಪಟ್ಟ ನಂತರ ಒತ್ತಡದಲ್ಲಿದ್ದಳು.
- ಒತ್ತಡದಿಂದಾಗಿ ನನ್ನ ಮಗಳು ನನ್ನಿಂದ ದೂರವಾಗುತ್ತಿದ್ದಳು.
- ಶೀಜಾನ್ ತನ್ನನ್ನು ಬಳಸಿಕೊಂಡಿದ್ದಾನೆ ಎಂದು ನನ್ನ ಮಗಳು ತುನಿಶಾ ಹೇಳಿಕೊಂಡಿದ್ದಾಳೆ.
- ಇದು ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ.
- ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿ.
- ಈ ಕುರಿತು ಗಂಭೀರವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಶೀಜಾನ್‌ನ ಫೋನ್‌ನಿಂದ 300 ಪುಟಗಳ ಚಾಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
- ಈ ವೇಳೆ ಶೀಜಾನ್ ಮಾಜಿ ಪ್ರೇಯಸಿಯ ಹೆಸರೂ ಮುನ್ನೆಲೆಗೆ ಬರುತ್ತಿದೆ ಎಂದು ತಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ತುನಿಶಾ ತಾಯಿ ಭೇಟಿಯಾದ ಕೇಂದ್ರ ಸಚಿವ ರಾಮದಾಸ್ ಅಠವಳೆ: ಕಠಿಣ ಶಿಕ್ಷೆಗೆ ಆಗ್ರಹ
ಮಗಳನ್ನು ಶೂಟಿಂಗ್ ಸೆಟ್ನ ಕೋಣೆಯಿಂದ ಹೊರಗೆ ಕರೆದೊಯ್ದರು. ಆದರೆ ಆಂಬ್ಯುಲೆನ್ಸ್‌ಗೆ ಕರೆ ಮಾಡಲಿಲ್ಲ. ಇದು ಕೊಲೆಯೂ ಆಗಿರಬಹುದು. ಅಲ್ಲದೇ ಹಿಜಾಬ್ ಧರಿಸುವಂತೆ ಶೀಜಾನ್ ಒತ್ತಾಯಿಸಿದ್ದಾನೆ ಎಂದು ವನಿತಾ ಶರ್ಮಾ ಆರೋಪಿಸಿದ್ದಾರೆ. ಅಲ್ಲದೇ ಸೆಟ್ನಲ್ಲಿಯೇ ಶೀಜಾನ್ ಡ್ರಗ್ಸ್ ಸೇವಿಸುತ್ತಿದ್ದರು ಎಂದು ತುನಿಶಾ ನನಗೆ ಮಾಹಿತಿ ನೀಡಿದ್ದಾಳೆ. ತುನಿಶಾಳ ವರ್ತನೆಯಲ್ಲಿ ಕೆಲ ಬದಲಾವಣೆಗಳಾಗಿದ್ದವು. ಶೀಜಾನ್ ನನ್ನ ಮಗಳಲ್ಲಿ ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಒತ್ತಾಯಿಸಿದ್ದರು ಎಂದು ವನಿತಾ ಅವರು ಹೇಳಿದ್ದಾರೆ. ತುನಿಶಾ ಅಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಸಹ ಮಾಡಿದ್ದಳು. ಆದರೆ ಅದರ ನಂತರ ಏನಾಯಿತು, ನಮಗೆ ತಿಳಿದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ರಾಮದಾಸ್ ಅಠವಳೆ ಪ್ರತಿಕ್ರಿಯೆ: ಗುರುವಾರ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ನಟಿ ತುನಿಶಾ ಶರ್ಮಾ ಅವರ ತಾಯಿಯನ್ನು ಭೇಟಿಯಾಗಿ ಮಾತನಾಡಿದ್ದರು. ಬಳಿಕ ಪ್ರತಿಕ್ರಿಯಿಸಿದ ಅವರು, ಆರೋಪಿ ಶೀಜಾನ್ ಖಾನ್ಗೆ ಕಠಿಣ ಶಿಕ್ಷೆಯಾಗಬೇಕು.ಇದು ಖಂಡಿತವಾಗಿಯೂ ಆಗುತ್ತದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ. ಆರೋಪಿ ಆಕೆಗೆ ದ್ರೋಹ ಎಸಗಿದ್ದಾನೆ ಎಂದು ಆರೋಪಿಸಿದರು.