ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಕಿರಿ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಮೇಲೂ ಕನ್ನಡ ಅಭಿಮಾನಿಗಳ ಮನಸ್ಸಿನ ಮನೆ ಮಾಡಿರುವ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸ್ಮರಣೆ ನಿತ್ಯವೂ ನಡೆಯುತ್ತಿರುತ್ತದೆ. ತನ್ನ ಪತಿ ಮಾಡಿದ್ದ ಒಳ್ಳೆ ಕೆಲಸಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸ್ಯಾಂಡಲ್ವುಡ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹಂಬಲಿಸುತ್ತಿದ್ದ ಅಪ್ಪು ನಮ್ಮನ್ನಗಲಿ ಒಂದು ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಇದೀಗ ಅವರ ಸಿನಿಮಾ ಸಂಸ್ಥೆಯ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ತೆಗೆದುಕೊಂಡಿದ್ದಾರೆ. ಇದೇ ದೊಡ್ಮನೆಯ ಮತ್ತೊಂದು ಕುಡಿ ಸಿನಿರಸಿಕರಿಗೆ 'ಒಂದು ಸರಳ ಪ್ರೇಮಕಥೆ' ಹೇಳಲು ಸಜ್ಜಾಗಿದೆ. ಸಿನಿಮಾ ಮೇಲೆ ದೊಡ್ಮನೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.
ಒಂದು ಸರಳ ಪ್ರೇಮಕಥೆ ಸಿನಿಮಾ: ನಿರ್ದೇಶಕ ಸಿಂಪಲ್ ಸುನಿ ಹಾಗು ವಿನಯ್ ರಾಜ್ಕುಮಾರ್ ಕಾಂಬಿನೇಶನ್ನಲ್ಲಿ ಸಿನಿಮಾ ಸಿದ್ಧಮಾಗುತ್ತಿರುವುದು ಗೊತ್ತಿರುವ ವಿಚಾರ. ಈ ಚಿತ್ರದ ಶೀರ್ಷಿಕೆಯ ಜೊತೆಗೆ ನಾಯಕಿ ಯಾರು ಎಂಬುದು ಕೂಡ ಫೈನಲ್ ಆಗಿದೆ. ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ 'ಒಂದು ಸರಳ ಪ್ರೇಮಕಥೆ' ಚಿತ್ರದ ಮೂಲಕ 'ವಿಕ್ರಮ್' ಸಿನಿಮಾದಲ್ಲಿ ನಟಿಸಿರುವ ನಟಿ ಸ್ವತಿಷ್ಠ ಕೃಷ್ಣನ್ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಸ್ವತಿಷ್ಠ ಕೃಷ್ಣನ್: ವಿನಯ್ ರಾಜ್ಕುಮಾರ್ ಹಾಗು ಸಿಂಪಲ್ ಸುನಿ ಕಾಂಬಿನೇಶನ್ನಲ್ಲಿ ಬರಲಿರುವ ಮೊದಲ ಸಿನಿಮಾ 'ಒಂದು ಸರಳ ಪ್ರೇಮಕಥೆ'. ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮ್ಯೂಸಿಕಲ್ ಲವ್ ಸ್ಟೋರಿ ವಿಷಯ ಹೊಂದಿರುವ ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದ ಸಿಂಪಲ್ ಸುನಿ ಧಾರವಾಡ ಮೂಲದ ಕನ್ನಡತಿ ನಟಿ ಸ್ವತಿಷ್ಠ ಕೃಷ್ಣನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸ್ವತಿಷ್ಠ ಕೃಷ್ಣನ್ ಕಮಲ್ ಹಾಸನ್ ನಟನೆಯ 'ವಿಕ್ರಮ್' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇದೀಗ ದೊಡ್ಮನೆಯ ವಿನಯ್ ರಾಜ್ಕುಮಾರ್ ಅವರಿಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ವುಡ್ನಲ್ಲೂ ಮಿಂಚು ಹರಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ನಾಟು ನಾಟು ಹಾಡು ನಾಮಿನೇಟ್: ಎರಡು ಕಿರುಚಿತ್ರಗಳು ಸಹ ರೇಸ್ನಲ್ಲಿ
ಕನ್ನಡದ ನಟಿಯರಿಗೆ ಮೊದಲ ಆದ್ಯತೆ: ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಸಿಂಪಲ್ ಸುನಿ, "ನಮ್ಮ ಸಿನಿಮಾಗೆ ಕನ್ನಡದ ಹುಡುಗಿಯೇ ನಾಯಕಿಯಾಗಿ ಬೇಕಿತ್ತು. ನನ್ನ ಎಲ್ಲಾ ಸಿನಿಮಾಗಳಲ್ಲೂ ಅದು ಮೊದಲ ಆದ್ಯತೆಯಾಗಿರುತ್ತದೆ. ವಿಕ್ರಮ್ ಸಿನಿಮಾದಲ್ಲಿ ಸ್ವತಿಷ್ಠ ಕೃಷ್ಣನ್ ಅವರ ಪಾತ್ರ ನೋಡಿ ಇಷ್ಟವಾಗಿತ್ತು. ಸ್ವತಿಷ್ಠ ಮೂಲತಃ ಉತ್ತರ ಕರ್ನಾಟಕದವರು. ನಮ್ಮ ಸಿನಿಮಾ ಪಾತ್ರಕ್ಕೆ ಅವರು ಸೂಕ್ತ ಎನಿಸಿತು. ಅವರು ಕೂಡ ಕಥೆ ಕೇಳಿ ಓಕೆ ಮಾಡಿ ನಮ್ಮ ಚಿತ್ರತಂಡ ಸೇರಿಕೊಂಡಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ‘ಪಠಾಣ್’ಗೆ ಬೆಳಗಾವಿಯಲ್ಲಿ ಆಕ್ರೋಶ: ಚಿತ್ರಮಂದಿರದ ಮೇಲೆ ದಾಳಿ, 30 ಹಿಂದೂಪರ ಕಾರ್ಯಕರ್ತರ ವಿರುದ್ಧ ದೂರು
ಪ್ರಿ ಪ್ರೊಡಕ್ಷನ್ ಕೆಲಸ ಚುರುಕು: ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಬರೆದು ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಸಿನಿಮಾ ತಾರಾಬಳಗ ಸೇರಿದಂತೆ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನ, ಸಭಾ ಛಾಯಾಗ್ರಾಹಣ ಇರಲಿದೆ.