'ಸ್ವಾತಿ ಮುತ್ತಿನ ಮಳೆ ಹನಿಯೇ' ಕನ್ನಡ ಚಿತ್ರರಂಗದಲ್ಲೀಗ ಗಮನ ಸೆಳೆಯುತ್ತಿರುವ ಹೊಸ ಸಿನಿಮಾ. ಮೋಹಕತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಚಿತ್ರ ಅನ್ನೋದು ಒಂದೆಡೆಯಾದರೆ, ಪ್ರತಿಭಾನ್ವಿತ ನಟ ರಾಜ್ ಬಿ.ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ ಅನ್ನೋದು ಮತ್ತೊಂದು ವಿಶೇಷತೆ. ಬಿಡುಗಡೆಗೆ ಇನ್ನೇನು ಕೆಲವೇ ಕೆಲ ದಿನಗಳು ಬಾಕಿ ಉಳಿದಿದ್ದು, ಸಿನಿಮಾ ಸುದ್ದಿಯಲ್ಲಿದೆ. ಆದರೆ, ರಮ್ಯಾ ಅವರು ಈ ಚಿತ್ರದಿಂದ ಹೊರಗುಳಿದಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಸ್ಯಾಂಡಲ್ವುಡ್ ಕ್ವೀನ್, 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಆದರೆ, ಚಿತ್ರ ಘೋಷಣೆಯಾದ ಪ್ರಾರಂಭದಲ್ಲಿ ರಾಜ್ ಬಿ.ಶೆಟ್ಟಿ ಅವರಿಗೆ ಜೋಡಿಯಾಗಿ ರಮ್ಯಾ ಅವರೇ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆ ಬಳಿಕ ಚಿತ್ರತಂಡದಿಂದ ನಾಯಕಿಯಾಗಿ ಸಿರಿ ರವಿಕುಮಾರ್ ಅವರನ್ನು ಪರಿಚಯಿಸಲಾಯಿತು. ಇತ್ತೀಚೆಗೆ ರಮ್ಯಾ ಅವರು ಈ ಚಿತ್ರದಿಂದಲೇ ದೂರ ಸರಿದಿದ್ದಾರೆ ಎಂಬ ಮಾತೊಂದು ಕೇಳಿಬಂದಿತ್ತು. ಈ ಬಗ್ಗೆ ಇದೀಗ ಮೋಹಕ ತಾರೆ ಪ್ರತಿಕ್ರಿಯಿಸಿದ್ದಾರೆ.
ಸೋಷಿಯಲ್ ಮೀಡಿಯಾ ವೇದಿಕೆ ಇನ್ಸ್ಟಾಗ್ರಾಮ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. "ದೀಪಾವಳಿ ಹಬ್ಬದ ಶುಭಾಶಯಗಳು. ಹಳೆಯದನ್ನು ಮರೆತು ಹೊಸತಿನೆಡೆಗಿನ ಪಯಣ. ಸ್ವಾತಿ ಮುತ್ತಿನ ಮಳೆ ಹನಿಯೇ (SMMH)- ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೆ ಅಲ್ಲ. ಬದಲಿಗೆ ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧಾರಿತ ಚಿತ್ರ. ಪ್ರೀತಿಸಿದವರ ಅಗಲಿಕೆಯ ನೋವು, ಅದರಿಂದ ಹೊರ ಬರಲು ಅಸಾಧ್ಯ ಎಂದು ತಿಳಿದಿದ್ದರೂ ನಾವು ಮಾಡುವ ಪ್ರಯತ್ನ. ಈ ಅನುಭವವು ನಮ್ಮನ್ನು ಹೆಚ್ಚು ಪಕ್ವಗೊಳಿಸುತ್ತದೆ. SMMH ಚಿತ್ರವು ಈ ಪ್ರಕ್ರಿಯೆಯನ್ನು ಮನಸ್ಸಿಗೆ ನಾಟುವಂತೆ ಸೆರೆ ಹಿಡಿದಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ವಿವಾದದಲ್ಲಿ ಮೋಹಕ ತಾರೆಗೆ ಸಿಕ್ತು ಜಯ
ಅಲ್ಲದೇ, "ಸಿನಿಮಾದಲ್ಲಿನ ಸಿರಿಯ ನಟನೆ ಅದ್ಭುತ. ರಾಜ್ ತಾವು ಒಬ್ಬ ಪ್ರತಿಭಾನ್ವಿತ ನಟರೆಂದು ನಿರೂಪಿಸಿದ್ದಾರೆ. ಕಥೆಯನ್ನು ಅವರು ವಿವರಿಸಿದಾಗ, ಕಥೆಯ ಬಗೆಗಿನ ವಿವರಣೆ ನನ್ನನ್ನು ಭಾವುಕಳನ್ನಾಗಿಸಿತು. ಪ್ರವೀಣ್ ಶ್ರಿಯಾನ್ ಛಾಯಾಚಿತ್ರಗ್ರಹಣ, ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿ ಮೂಡಿ ಬಂದಿದ್ದು, 'ಪ್ರೇರಣಾ ಥೀಮ್' ನನ್ನ ನೆಚ್ಚಿನ ಹಾಡಾಗಿದೆ. ನೀವೆಲ್ಲರೂ ಈ ಹಾಡು ಕೇಳಬೇಕೆಂಬ ಕಾತರ ನನಗಿದೆ. ಈ ಚಿತ್ರದ ತಿರುಳು ನಿಮ್ಮ ಮನದಲ್ಲಿ ಬಹಳ ಸಮಯ ಉಳಿಯುತ್ತದೆ ಎಂಬುದು ನನ್ನ ಆಶಯ. ಇಡೀ ಚಿತ್ರತಂಡಕ್ಕೆ, ವಿಶೇಷವಾಗಿ ಸುನಯನಾ, ಕೆವಿನ್, ಕಾರ್ತಿಕ್ ಮತ್ತು ಯೋಗಿ ಇವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಬಳಿಕ ತಾವು ಈ ಸಿನಿಮಾದಿಂದ ಹೊರಗುಳಿಯಲು ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ. "ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದಿದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಮ್ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕು ಎಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ನಾವು ಹುಡುಕುತ್ತೇವೆ. SMMH ಚಿತ್ರವು ಇದೇ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ನಿಮ್ಮ ಪ್ರೀತಿಪಾತ್ರರೊಂದಿಗೆ ಚಿತ್ರವನ್ನು ವೀಕ್ಷಿಸಿ. ಪ್ರೀತಿಯ ಸ್ವಾದವನ್ನು ಸವಿಯಿರಿ. ಮತ್ತೊಮ್ಮೆ ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೋಹಕ ತಾರೆ ರಮ್ಯಾ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್