ವಿಜಯ ದಶಮಿಯ ಶುಭ ದಿನದಂದು ಸ್ಯಾಂಡಲ್ ವುಡ್ನ ಹೊಸ ಸಿನಿಮಾಗಳು ಸದ್ದಿಲ್ಲದೇ ಸೆಟ್ಟೇರಿವೆ. ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವ ಕೈಮರ ಚಿತ್ರದ ಮುಹೂರ್ತ ಕಾರ್ಯಕ್ರಮ ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ನಡೆದಿದೆ.
ಕೈಮರ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುತ್ತಿರುವ ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಈ ಸಿನಿಮಾದಲ್ಲಿ ನಾನು ಈ ತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರಿಯಾಮಣಿ, ಛಾಯಾಸಿಂಗ್ ಅವರೊಟ್ಟಿಗೆ ಅಭಿನಯಿಸುತ್ತಿರುವುದು ಖುಷಿಯಿದೆ. ಇನ್ನು ಕನ್ನಡದಲ್ಲಿ ಕೆ.ಜಿ.ಎಫ್, ಕಾಂತಾರ ಅಂತಹ ಡಿಫರೆಂಟ್ ಜಾನರ್ನ ಚಿತ್ರಗಳು ಜನ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ಕೈಮರ ಚಿತ್ರದ ಕಥೆ ಸಹ ಡಿಫರೆಂಟ್ ಆಗಿದ್ದು, ನೋಡುಗರ ಮನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
![kaimara movie](https://etvbharatimages.akamaized.net/etvbharat/prod-images/16567632_news.jpg)
ಖ್ಯಾತ ನಿರ್ದೇಶಕ ಪಿ.ವಾಸು ಅವರ ತಮ್ಮನ ಮಗ ಗೌತಮ್ ವಿಮಲ್ ಈ ಚಿತ್ರದಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾನು ಈ ಹಿಂದೆ ಸಾಕಷ್ಟು ಹಾರರ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದೊಂದು ಹಾರರ್ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರ.
ನನ್ನ ನಿರ್ದೇಶನದ ಮೊದಲ ಚಿತ್ರ ಸಹ. ಕಳೆದ ಮೂರು ವರ್ಷಗಳಿಂದ ಕೈಮರ ಕುರಿತಾದ ಕೆಲಸಗಳು ನಡೆಯುತ್ತಿದ್ದವು. ಕೋವಿಡ್ ಕಾರಣದಿಂದ ಚಿತ್ರೀಕರಣ ಆರಂಭವಾಗುವುದು ಸ್ವಲ್ಪ ತಡವಾಯಿತು. ಈಗ ದಸರಾದ ಶುಭ ದಿನದಲ್ಲಿ ಮುಹೂರ್ತ ನಡೆದಿದೆ. ಅಕ್ಟೋಬರ್ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಗೌತಮ್ ವಿಮಲ್.
ಇದನ್ನೂ ಓದಿ: ಮೊಗ್ಗಿನ ಮನಸ್ಸು ನಿರ್ದೇಶಕನ ಜೊತೆ ಡಾರ್ಲಿಂಗ್ ಕೃಷ್ಣನ ಹೊಸ ಸಿನಿಮಾ
ಕೈಮರ ಸಿನಿಮಾ ಭಿನ್ನವಾಗಿರಲಿದೆ. ಪಿ. ವಿಮಲ್ ಕಥೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ "ಕೈಮರ"ದಲ್ಲಿರಲಿದೆ. ನಾನು ಹಾಗೂ ವಿನಯ್ ಗೌಡ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ. ಕೈಮರ ಸಿನಿಮಾ 2023ರ ಉತ್ತಮ ಚಿತ್ರವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ನಿರ್ಮಾಪಕ ಹಾಗೂ ನಟ ವಿ.ಮತ್ತಿಯಳಗನ್ ವಿಶ್ವಾಸ ವ್ಯಕ್ತಪಡಿಸಿದರು.